ADVERTISEMENT

ಕಾಳಿ ನದಿ: ಕೆರೆ, ಬಾಂದಾರಗಳಿಗೆ ಶೀಘ್ರ ನೀರು: ಶಾಸಕ ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:32 IST
Last Updated 30 ಸೆಪ್ಟೆಂಬರ್ 2025, 6:32 IST
ಶಾಸಕ ಆರ್.ವಿ.ದೇಶಪಾಂಡೆ
ಶಾಸಕ ಆರ್.ವಿ.ದೇಶಪಾಂಡೆ   

ಹಳಿಯಾಳ: ‘ಕಾಳಿ ನದಿಯಿಂದ ತಾಲ್ಲೂಕಿನ ಕೆರೆ ಮತ್ತು ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಶೀಘ್ರದಲ್ಲಿ ತಾಲ್ಲೂಕಿನ ರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಸೋಮವಾರ ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ‘ತಾಲೂಕಿನ 46 ಕೆರೆ ಮತ್ತು 19 ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಸುಮಾರು 7 ಸಾವಿರ ಹೆಕ್ಟೇರ್‌ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಯೋಜನೆಯ ಪರೀಕ್ಷಾರ್ಥ ಕಾರ್ಯಾಚರಣೆ ಶೀಘ್ರದಲ್ಲಿಯೇ ನಡೆಸಲಾಗುವುದು’ ಎಂದರು.

‘ಹಳಿಯಾಳ ಪಟ್ಟಣದಲ್ಲಿಯ ಮೇಲ್ದರ್ಜೆಗೆ ಏರಿಸಿದ ಕುಡಿಯುವ ನೀರಿನ ಯೋಜನೆ ಹಾಗೂ ದಾಂಡೇಲಿಯಲ್ಲಿ ಪ್ರಾರಂಭಿಸಲಾದ 24X7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಡಿಸೆಂಬರ್ ಒಳಗಾಗಿ ಮುಗಿಯಲಿದೆ. ತಾಲ್ಲೂಕಿನ 80 ಹಳ್ಳಿಗಳಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಹ ಜನವರಿಯಲ್ಲಿ ಮುಗಿದು ಯೋಜನೆ ಕಾರ್ಯಗತವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಜೋಯಿಡಾ ತಾಲ್ಲೂಕಿನ ಉಳುವಿ, ಡಿಗ್ಗಿ, ಗೋವಾ ಗಡಿ ರಸ್ತೆಗೆ ಹೊಂದಿಕೊಂಡಿರುವ ಸೇತುವೆ ನಿರ್ಮಾಣಕ್ಕೆ ₹75 ಲಕ್ಷ, ಅಣಶಿ ರಸ್ತೆ ಸೇತುವೆ ನಿರ್ಮಾಣಕ್ಕೆ ₹90 ಲಕ್ಷ, ಫೋಟೋಳಿ ಕುಳಗಿ ರಸ್ತೆ ಸೇತುವೆ ನಿರ್ಮಾಣಕ್ಕೆ ₹66 ಲಕ್ಷ ಮಂಜೂರಿಯಾಗಿ ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ.’ ಎಂದು ಹೇಳಿದರು.

‘ಕಾವಲವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯನ್ನು ಒಂಬತ್ತನೇ ತರಗತಿಯವರಿಗೆ ವಿಸ್ತರಿಸಿ ಪ್ರೌಢಶಾಲೆಗೆ ಉನ್ನತಿಕರಿಸಲಾಗಿದೆ. ಆರೋಗ್ಯ ಸಹಾಯ ಯೋಜನೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ದಾಂಡೇಲಿಯ ವಿನಾಯಕ ಶಂಕರ ಕುಂಬಾರರಿಗೆ ₹40 ಸಾವಿರ ಮಂಜೂರಿಯಾಗಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಪುರಸಭೆ ಸದಸ್ಯ ಸತ್ಯ ಜಿತಗಿರಿ ಇದ್ದರು.

‘ದಾಂಡೇಲಿ ರೈಲು ನಿಲ್ದಾಣ: ಮೂಲ ಸೌಕರ್ಯ’

ದಾಂಡೇಲಿ (ಅಂಬೇವಾಡಿ) ಅಳ್ಳಾವರ ರೈಲ್ವೆ ಸಂಚಾರವನ್ನು ಪುನಃ ಪ್ರಾರಂಭಿಸಲಾಗುವುದು. ಈ ಬಗ್ಗೆ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈಗಾಗಲೇ ತಮಗೆ ಫೋನ್‌ ಮೂಲಕ ತಿಳಿಸಿದ್ದಾರೆ. ತಾವು ಸಹ ರೈಲು ಸಂಚಾರ ಪುನಃ ಪ್ರಾರಂಭಿಸಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದ್ದೆ. ದಾಂಡೇಲಿ ಪ್ರವಾಸೋದ್ಯಮ ಸ್ಥಾನವಾಗಿ ಬೆಳೆಯುತ್ತಿದ್ದು ದಾಂಡೇಲಿ (ಅಂಬೇವಾಡಿ) ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ’ ಎಂದು ಶಾಸಕ ದೇಶಪಾಂಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.