ADVERTISEMENT

ಕರಾವಳಿ ಉತ್ಸವ: ಗಾಂಧಿ ಉದ್ಯಾನದ ಗೋಡೆಯ ಮೇಲೆ ಸಾಂಸ್ಕೃತಿಕ ಬಿಂಬ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:31 IST
Last Updated 21 ಡಿಸೆಂಬರ್ 2025, 4:31 IST
ಕಾರವಾರ ನಗರಸಭೆಯ ಆವರಣಗೋಡೆಯ ಮೇಲೆ ಕಲಾವಿದರು ಚಿತ್ರ ಬಿಡಿಸಿದರು
ಕಾರವಾರ ನಗರಸಭೆಯ ಆವರಣಗೋಡೆಯ ಮೇಲೆ ಕಲಾವಿದರು ಚಿತ್ರ ಬಿಡಿಸಿದರು   

ಕಾರವಾರ: ಕರಾವಳಿ ಉತ್ಸವ ಆರಂಭಕ್ಕೆ ಎರಡು ದಿನ ಬಾಕಿ ಇರುವಂತೆಯೇ ನಗರದಲ್ಲಿ ಉತ್ಸವದ ಸಂಭ್ರಮ ಮನೆ ಮಾಡಿದ್ದು, ಶನಿವಾರ ಇಲ್ಲಿನ ಗಾಂಧಿ ಉದ್ಯಾನ ಮತ್ತು ನಗರಸಭೆ ಕಚೇರಿಯ ಆವರಣಗೋಡೆಗಳು ಚಿತ್ತಾಕರ್ಷಕ ಚಿತ್ರಗಳಿಂದ ತುಂಬಿಹೋದವು.

ಉತ್ಸವದ ಭಾಗವಾಗಿ ಗೋಡೆಯ ಮೇಲೆ ಚಿತ್ರ ರಚನೆಯ ಸ್ಪರ್ಧೆ ಹಮ್ಮಿಕೊಂಡಿದ್ದು ಜಿಲ್ಲೆಯ ವಿವಿಧೆಡೆಯಿಂದ 94 ಮಂದಿ ಸ್ಪರ್ಧಿಗಳು 47 ತಂಡ ರಚಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ವಚ್ಛ ಭಾರತ ಮಿಷನ್, ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕತೆ ಮತ್ತು ಪರಿಸರ ಸಂರಕ್ಷಣೆ ವಿಷಯ ಆಧಾರವಾಗಿಟ್ಟುಕೊಂಡು ಚಿತ್ರ ರಚಿಸಲು ಸೂಚನೆ ನೀಡಲಾಗಿತ್ತು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಗೋಡೆಯ ಮೇಲೆ ಚಿತ್ರ ರಚಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಅದಾದ ಬಳಿಕ ಸ್ಪರ್ಧಿಗಳು ಗೋಡೆಯ ಮೇಲೆ ಚಿತ್ರ ರಚಿಸಲು ಆರಂಭಿಸಿದರು. ಸುಮಾರು 7 ತಾಸು ನಿರಂತರ ಶ್ರಮದ ಬಳಿಕ ಅಂದದ ಚಿತ್ರಗಳು ಗೋಡೆಯ ಮೇಲೆ ಮೂಡಿದವು. ಸಾಲು ಮರದ ತಿಮ್ಮಕ್ಕ, ಬೇಡರ ವೇಷ, ಯಕ್ಷಗಾನ ವೈವಿಧ್ಯ, ಹಾಲಕ್ಕಿ ಸಂಸ್ಕೃತಿ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ಸಿರಿವಂತಿಕೆ ಬಿಂಬಿಸುವ ಜೊತೆಗೆ ಪರಿಸರ ಸಂರಕ್ಷಣೆ, ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಚಿತ್ರಗಳು ಗಮನಸೆಳೆದವು.

ADVERTISEMENT

ಸ್ಪರ್ಧಿಗಳಿಗೆ ನಗರಸಭೆ ವತಿಯಿಂದ ಬಣ್ಣ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತು. ನೆಹರು ಯುವ ಕೇಂದ್ರ ಸ್ಪರ್ಧೆಗೆ ಸಹಕಾರ ನೀಡಿತ್ತು. ಸ್ಪರ್ಧೆಯಲ್ಲಿ ನುರಿತ ಕಲಾವಿದರ, ಹವ್ಯಾಸಿ ಕಲಾವಿದರು, ನಗರಸಭೆ, ನಗರಾಭಿವೃದ್ಧಿಕೋಶದ ಸಿಬ್ಬಂದಿ ಪಾಲ್ಗೊಂಡಿದ್ದರು.

ಶಾಸಕ ಸತೀಶ ಸೈಲ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪೌರಾಯುಕ್ತ ಜಗದೀಶ ಹುಲಗೆಜ್ಜಿ, ನಗರಸಭೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕರಾವಳಿ ಉತ್ಸವ–2025
ವಿಜೇತರಿವರು
ಗೋಡೆ ಚಿತ್ರ ರಚನೆ ಸ್ಪರ್ಧೆಯಲ್ಲಿ ಅಂಕೋಲಾದ ವಿಷ್ಣು ಎಂ.ಗೌಡಾ ಪ್ರಥಮ, ಮಂಗೇಶ ಆಚಾರಿ ದ್ವಿತೀಯ, ನವೀನ ದಿವಾಕರ ಶೆಡಗೇರಿ ತೃತೀಯ ಸ್ಥಾನ ಪಡೆದರು. ಹಿರಿಯ ಚಿತ್ರ ಕಲಾವಿದರಾದ ಅನಿಲ ಮಡಿವಾಳ, ಕೆ.ಜಾನ್ ಬೆಲ್, ರಿತೇಶ್ ಆಚಾರಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.