ADVERTISEMENT

ಉತ್ತರ ಕನ್ನಡ: ಜಿಲ್ಲೆಯಲ್ಲಿ ಶೇ 71.08ರಷ್ಟು ಮತದಾನ

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 16:06 IST
Last Updated 28 ಅಕ್ಟೋಬರ್ 2020, 16:06 IST
ಪಶ‌್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಬುಧವಾರ ಕಾರವಾರದ ಸೇಂಟ್ ಮೈಕಲ್ ಕಾನ್ವೆಂಟ್‌ನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತದಾರರೊಬ್ಬರು ಹಕ್ಕು ಚಲಾಯಿಸಿದರು
ಪಶ‌್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಬುಧವಾರ ಕಾರವಾರದ ಸೇಂಟ್ ಮೈಕಲ್ ಕಾನ್ವೆಂಟ್‌ನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತದಾರರೊಬ್ಬರು ಹಕ್ಕು ಚಲಾಯಿಸಿದರು   

ಕಾರವಾರ: ವಿಧಾನಪರಿಷತ್‌ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಬುಧವಾರ ನಡೆದ ಮತದಾನವು ಶಾಂತಿಯುತವಾಗಿ ನೆರವೇರಿತು. ಒಟ್ಟು ಶೇ 71.08ರಷ್ಟು ಮತದಾನವಾಯಿತು.

ನಗರದ ಸೇಂಟ್ ಮೈಕಲ್ ಕಾನ್ವೆಂಟ್‌ ಹಾಗೂ ಮಲ್ಲಾಪುರದ ಮತದಾನ ಕೇಂದ್ರಗಳಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಮತದಾರರು ಅಷ್ಟಾಗಿ ಬಂದಿರಲಿಲ್ಲ. ಆದರೆ, ಮಧ್ಯಾಹ್ನದ ನಂತರ ಹೆಚ್ಚಿನ ಆಸಕ್ತಿ ತೋರಿ ಸಾಲಿನಲ್ಲಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸಿದರು.

ಸಾಂಕ್ರಾಮಿಕ ಸೋಂಕು ಕೋವಿಡ್ ಕಾರಣದಿಂದ ಮತಗಟ್ಟೆಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತದಾನ ಮಾಡುವ ಪ್ರತಿಯೊಬ್ಬರ ಆರೋಗ್ಯವನ್ನೂ ಮತಗಟ್ಟೆ ಪ್ರವೇಶದ್ವಾರದಲ್ಲೇ ಪರೀಕ್ಷಿಸಿಯೇ ಒಳಗೆ ಬಿಡಲಾಯಿತು. ಮತ ಪೆಟ್ಟಿಗೆ ಇಡಲಾಗಿದ್ದ ಕೊಠಡಿಗಳ ಬಾಗಿಲಿನ ಬಳಿ ಸ್ಯಾನಿಟೈಸರ್ ಇಡಲಾಗಿತ್ತು. ಮತದಾರರ ಬಳಿಯಿದ್ದ ಮೊಬೈಲ್, ಕ್ಯಾಮೆರಾ ಮುಂತಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲು ಮತ್ತು ಅವುಗಳ ಎಚ್ಚರಿಕೆ ವಹಿಸಲು ಸಿಬ್ಬಂದಿಯನ್ನು ನೇಮಿಸಲಾಗಿತ್ತು.

ADVERTISEMENT

ಮತಗಟ್ಟೆಗಳಲ್ಲಿ ಕೈಗೊಳ್ಳಲಾದ ಸುರಕ್ಷಾ ಕ್ರಮಗಳನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಉಪ ವಿಭಾಗಾಧಿಕಾರಿ ಪ್ರಿಯಾಂಗಾ, ತಹಶೀಲ್ದಾರ್ ಆರ್.ವಿ.ಕಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.