ಕಾರವಾರ: ‘ಕಾಂಗ್ರೆಸ್‌ನವರು ಅವರ ಪಕ್ಷದಿಂದ ಬೇರೆ ಪಕ್ಷಕ್ಕೆ ಬರುವವರನ್ನು ತಡೆದು ನಿಲ್ಲಿಸಿಕೊಳ್ಳಲಿ. ಆನಂತರ ಬೇರೆ ಪಕ್ಷದವರ ಬಗ್ಗೆ ಆಲೋಚನೆ ಮಾಡಲಿ. ಬಿಜೆಪಿಯ ಯಾವ ಶಾಸಕನೂ ಮಂತ್ರಿಯೂ ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬುಧವಾರ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಮಂಗಳವಾರ ರಾತ್ರಿ ನಗರಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಯಾರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂದು ಕಾಂಗ್ರೆಸ್‌ನವರಿಗೇ ಗೊತ್ತಿಲ್ಲ. ಅವರ ಊಹೆಗೆ ಅವರು ಹೇಳುತ್ತಿದ್ದಾರೆ. ಅದು ಠುಸ್ ಪಟಾಕಿ’ ಎಂದರು.
‘ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರದೇ ಆದ ಆಡಳಿತಾತ್ಮಕ ಸಮಸ್ಯೆಗಳಿರುತ್ತವೆ. ಸಂಪುಟ ವಿಸ್ತರಣೆ ವಿಚಾರವಾಗಿ ಬಿ.ಜೆ.ಪಿ.ಯ ಕೆಲವು ಶಾಸಕರು, ಸಚಿವರು ಅವರವರ ಅಭಿಪ್ರಾಯ ಹೇಳಿಕೊಂಡಿದ್ದಾರೆ. ನಮ್ಮಲ್ಲಿ ಅಭಿಪ್ರಾಯ ಭೇದವಿಲ್ಲ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಅಂತಿಮವಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಸಕಾಲದಲ್ಲಿ ಎಲ್ಲವೂ ಸುಖಾಂತ್ಯ ಆಗಲಿದೆ. ರಾಜಕಾರಣದಲ್ಲಿ ಗುಡುಗು, ಸಿಡಿಲು ಎಲ್ಲವೂ ಬರುತ್ತಿರುತ್ತವೆ. ಆಮೇಲೆ ತಣ್ಣನೆ ಮಳೆ ಬಂದಾಗ ಭೂಮಿ ತಂಪಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.