ADVERTISEMENT

ಮಳೆ ಮಾಪಕ ಯಂತ್ರಗಳ ಸ್ಥಿತಿಗತಿ ಪರಿಶೀಲಿಸಿ: ಎಡಿಸಿ ಸಾಜಿದ್ ಮುಲ್ಲಾ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:32 IST
Last Updated 12 ಜನವರಿ 2026, 7:32 IST
ಸಾಜಿದ್ ಮುಲ್ಲಾ
ಸಾಜಿದ್ ಮುಲ್ಲಾ   

ಕಾರವಾರ: ‘ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಳವಡಿಸಿರುವ ಮಳೆ ಮಾಪಕ ಹಾಗೂ ಹವಾಮಾನ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ನಿರಂತರವಾಗಿ ಪರಿಶೀಲಿಸಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿನ ಟೆಲಿಮೆಟ್ರಿಕ್ ಮಳೆಮಾಪಕ ಹಾಗೂ ಹವಾಮಾನ ಮಾಪನ ಕೇಂದ್ರಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ಕುರಿತು ಈಚೆಗೆ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

‘ಯಂತ್ರಗಳ ಕಾರ್ಯನಿರ್ವಹಣೆಯಲ್ಲಿ ದೋಷ ಕಂಡುಬಂದಲ್ಲಿ ತಕ್ಷಣವೇ ವರದಿ ಸಲ್ಲಿಸಿ, ಸಂಬಂಧಿಸಿದ ಏಜೆನ್ಸಿಗಳ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದರು.

ADVERTISEMENT

‘39 ಟೆಲಿಮೆಟ್ರಿಕ್ ಹವಾಮಾನ ಮಾಪನ ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 253 ಟೆಲಿಮೆಟ್ರಿಕ್ ಮಳೆಮಾಪಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅವುಗಳಿಂದ ದೊರೆಯುವ ಮಳೆ, ತಾಪಮಾನ, ಆದ್ರ‍ತೆ, ಗಾಳಿಯ ವೇಗ ಮತ್ತು ದಿಕ್ಕುಗಳಿಗೆ ಸಂಬಂಧಿಸಿದ ಮಾಹಿತಿಗಳು ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ ಹಾಗೂ ವಿಪತ್ತು ನಿರ್ವಹಣೆಗೆ ಅತ್ಯಂತ ಅಗತ್ಯವಾಗಿದೆ. ಹೀಗಾಗಿ,  ಯಂತ್ರಗಳು ಸುಸ್ಥಿತಿಯಲ್ಲಿರುವಂತೆ ಮೇಲ್ವಿಚಾರಣೆ ಕೈಗೊಳ್ಳಬೇಕು’ ಎಂದರು.

‘ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಟೆಲಿಮೆಟ್ರಿಕ್ ಮಳೆಮಾಪಕ ಕೇಂದ್ರಗಳ ದಿನನಿತ್ಯದ ಮೇಲ್ವಿಚಾರಣೆ ಮಾಡಲು ಜವಾಬ್ದಾರರಾಗಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರು ಪ್ರತಿವಾರ ಕನಿಷ್ಠ 10 ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳಿಗೆ ಭೇಟಿ ನೀಡಿ, ಅವುಗಳ ಕಾರ್ಯನಿರ್ವಹಣೆಯ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು’ ಎಂದು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.