ADVERTISEMENT

ಕಾರವಾರ | ಕಾಂಕ್ರೀಟ್ ಜಟ್ಟಿಗೆ ಸಿಆರ್‌ಝಡ್ ಅಡ್ಡಿ

ಗಣಪತಿ ಹೆಗಡೆ
Published 26 ನವೆಂಬರ್ 2025, 4:44 IST
Last Updated 26 ನವೆಂಬರ್ 2025, 4:44 IST
ಕಾರವಾರದ ಸದಾಶಿವಗಡ ಗುಡ್ಡದ ತಪ್ಪಲಿನಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದಿರುವ ಕಾಂಕ್ರೀಟ್ ಜಟ್ಟಿಯ ಗ್ಯಾಂಗ್‌ವೆ ಮೇಲೆ ಗಿಡಗಂಟಿ ಆವರಿಸಿಕೊಂಡಿರುವುದು
ಕಾರವಾರದ ಸದಾಶಿವಗಡ ಗುಡ್ಡದ ತಪ್ಪಲಿನಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದಿರುವ ಕಾಂಕ್ರೀಟ್ ಜಟ್ಟಿಯ ಗ್ಯಾಂಗ್‌ವೆ ಮೇಲೆ ಗಿಡಗಂಟಿ ಆವರಿಸಿಕೊಂಡಿರುವುದು   

ಕಾರವಾರ: ಇಲ್ಲಿನ ಸದಾಶಿವಗಡ ಗುಡ್ಡದ ತಪ್ಪಲಿನ ಬಳಿ, ಕಾಳಿ ನದಿಗೆ ಎರಡೂವರೆ ವರ್ಷದ ಹಿಂದೆ ಅಳವಡಿಸಿದ್ದ ರಾಜ್ಯದ ಮೊದಲ ತೇಲುವ ಕಾಂಕ್ರೀಟ್ ಜಟ್ಟಿ ಈವರೆಗೂ ಬಳಕೆಗೆ ಸಿಕ್ಕಿಲ್ಲ. ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ಅನುಮತಿ ಪಡೆಯುವ ಮೊದಲೇ ಅಳವಡಿಸಿದ್ದರಿಂದ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.

ಸಾಗರಮಾಲಾ ಯೋಜನೆಯ ಅಡಿ ಪ್ರವಾಸೋದ್ಯಮ ಮತ್ತು ಜಲಸಾಹಸ ಚಟುವಟಿಕೆಯ ಹಿತದೃಷ್ಟಿಯಿಂದ ಅಂದಾಜು ₹2 ಕೋಟಿ ವೆಚ್ಚದಲ್ಲಿ ಎರಡು ಕಾಂಕ್ರೀಟ್ ಜಟ್ಟಿಯನ್ನು ಇಲ್ಲಿ 2023ರ ಜುಲೈನಲ್ಲಿ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಇದುವರೆಗೆ ಒಂದು ದಿನವೂ ಜಟ್ಟಿ ಬಳಕೆ ಮಾಡಲು ಅನುಮತಿ ಸಿಕ್ಕಿಲ್ಲ. ಜಟ್ಟಿಯಿಂದ ದಡಕ್ಕೆ ಅಳವಡಿಸಿದ್ದ ಉಕ್ಕಿನ ಗ್ಯಾಂಗ್‌ ವೇ (ಕಿರು ಸೇತುವೆ) ಗುಡ್ಡದ ತಪ್ಪಲಿನಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದಿದೆ.

‘ಪ್ರಾಯೋಗಿಕವಾಗಿ ಕಾಂಕ್ರೀಟ್ ಜಟ್ಟಿಯನ್ನು ಅಳವಡಿಕೆ ಮಾಡಲಾಯಿತು. ತೇಲುವ ಕಾಂಕ್ರೀಟ್ ಜಟ್ಟಿ ಶಾಶ್ವತ ನಿರ್ಮಾಣ ಅಲ್ಲದ ಕಾರಣಕ್ಕೆ ಸಿಆರ್‌ಝಡ್ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರದ (ಐಡಬ್ಲ್ಯೂಎಐ) ಅನುಮತಿ ಪಡೆದು ಅಳವಡಿಕೆ ಮಾಡಲಾಯಿತು. ಆದರೆ, ಈ ಪ್ರದೇಶವು ಸಿಆರ್‌ಝಡ್ ವ್ಯಾಪ್ತಿಗೆ ಒಳಪಡುವ ಕಾರಣದಿಂದ ಅನುಮತಿ ಪಡೆದೇ ಜಟ್ಟಿ ಅಳವಡಿಸಬೇಕು ಎಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಗ್ಯಾಂಗ್ ವೇ ತೆಗೆದಿರಿಸಲಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ದಿಕ್ಸೂಚಿ, ಜಲಸಾಹಸ ಚಟುವಟಿಕೆಯ ದೋಣಿಗಳ ಬ್ಯಾಟರಿ ಚಾರ್ಜ್ ಮಾಡಬಲ್ಲ ಚಾರ್ಜಿಂಗ್ ಸೌಲಭ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಉಳ್ಳ ತೇಲುವ ಕಾಂಕ್ರೀಟ್ ಜಟ್ಟಿಯನ್ನು ಅನುಮತಿ ಪಡೆದುಕೊಳ್ಳದೆ ಅಳವಡಿಸಿದ್ದ ಬಂದರು ಜಲಸಾರಿಗೆ ಮಂಡಳಿ ಅಧಿಕಾರಿಗಳು ವರ್ಷಗಳಿಂದಲೂ ಸೌಲಭ್ಯ ಬಳಕೆಗೆ ಬರದಂತೆ ಮಾಡಿದ್ದಾರೆ. ಸರ್ಕಾರದ ಅನುದಾನ ಬಳಕೆಗೆ ಮುನ್ನ ಸೂಕ್ತ ಅನುಮತಿ ಪಡೆಯದಿರುವುದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ. ಅವರ ತಪ್ಪಿನಿಂದ ಜಲಸಾಹಸ ಚಟುವಟಿಕೆ, ಪ್ರವಾಸಿ ಬೋಟ್‌ಗಳ ನಿಲುಗಡೆಗೆ ವ್ಯವಸ್ಥೆ ಇದ್ದೂ ಇಲ್ಲದ ಸ್ಥಿತಿ ಎದುರಾಗಿದೆ’ ಎಂದು ಪ್ರವಾಸೋದ್ಯಮಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಅಳವಡಿಸಿದ್ದ ತೇಲುವ ಕಾಂಕ್ರೀಟ್ ಜಟ್ಟಿಗೆ ಮತ್ತು ಪ್ರಸ್ತಾವಿತ ಹೊಸ ಜಟ್ಟಿಗಳಿಗೆ ಸಿಆರ್‌ಝಡ್ ಅನುಮತಿಗೆ ಅರ್ಜಿ ಸಲ್ಲಿಸಿದ್ದು ಒಂದೆರಡು ವಾರದಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದೆ
ವಿನಾಯಕ ನಾಯ್ಕ ಬಂದರು ಎಂಜಿನಿಯರ್
ಹೊಸದಾಗಿ 4 ಜಟ್ಟಿ ಅಳವಡಿಕೆ
‘ಸಾಗರಮಾಲಾ ಯೋಜನೆಯಡಿ ಜಿಲ್ಲೆಯಲ್ಲಿ ಆರು ತೇಲುವ ಕಾಂಕ್ರೀಟ್ ಜಟ್ಟಿಗಳ ಅಳವಡಿಕೆಗೆ ಅನುಮತಿ ಸಿಕ್ಕಿದೆ. ಅವುಗಳಲ್ಲಿ ಎರಡು ಜಟ್ಟಿ ಈಗಾಗಲೆ ಸದಾಶಿವಗಡದ ಬಳಿ ಅಳವಡಿಕೆಯಾಗಿದೆ. ಅದರ ಸಮೀಪದಲ್ಲಿ ಇನ್ನೂ 3  ಜಟ್ಟಿ ಅಳವಡಿಕೆಯಾಗಲಿದೆ. ಕಾಳಿ ದ್ವೀಪದಲ್ಲಿ ಒಂದು ಜಟ್ಟಿ ಅಳವಡಿಕೆಯ ಪ್ರಸ್ತಾವ ಇದೆ. ಜಲಸಾಹಸ ಚಟುವಟಿಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಟ್ಟಿಗಳ ಸ್ಥಾಪನೆಯಾಗಲಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಬಂದರು ಎಂಜಿನಿಯರ್ ವಿನಾಯಕ ನಾಯ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.