ADVERTISEMENT

‘ಧರ್ಮದ ಪ್ರಸಾರ’ ಶಬ್ದ ತೆಗೆಯಲು ಒತ್ತಾಯ

10ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:31 IST
Last Updated 15 ಜೂನ್ 2022, 5:31 IST

ಕಾರವಾರ: ‘ಮತಾಂತರವನ್ನು ತಡೆಗಟ್ಟಲು ರಾಷ್ಟ್ರೀಯ ಮಟ್ಟದಲ್ಲಿ ಮತಾಂತರ ನಿಷೇಧ ಕಾನೂನು ಮಾತ್ರವಲ್ಲ, ಸಂವಿಧಾನದ ಅನುಚ್ಛೇದ 25ಕ್ಕೆ ತಿದ್ದುಪಡಿ ತರಬೇಕು. ಅದರಲ್ಲಿರುವ ‘ಧರ್ಮದ ಪ್ರಸಾರ’ ಎಂಬ ಶಬ್ದವನ್ನು ತೆಗೆದು ಹಾಕಬೇಕು’ ಎಂದು ಸಿಬಿಐ ಮಾಜಿ ಪ್ರಭಾರಿ ಮಹಾ ನಿರ್ದೇಶಕ ಎಂ.ನಾಗೇಶ್ವರ ರಾವ್ ಒತ್ತಾಯಿಸಿದ್ದಾರೆ.

ಗೋವಾದ ಪೋಂಡಾದಲ್ಲಿ ನಡೆಯುತ್ತಿರುವ 10ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಮೂರನೇ ದಿನವಾದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ದೇಶದಲ್ಲಿ ಈಗ ಪ್ರತಿ ವರ್ಷ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರಿಸಿ ಅವರನ್ನು ಕ್ರೈಸ್ತ ಮತ್ತು ಮುಸಲ್ಮಾನರನ್ನಾಗಿ ಮಾಡಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಿದೆ. ಆದರೂ ರಾಜಾರೋಷವಾಗಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂ ತರಿಸಿ, ಭಾರತವನ್ನು ಒಡೆದು ನಾಶ ಮಾಡುವ ಸಂಚು ಮುಂದುವರಿದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ತಮ್ಮ ತಮ್ಮ ಧರ್ಮದ ಪಾಲನೆಯನ್ನು ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ, ಇತರರನ್ನು ಮೋಸಗೊಳಿಸಿ ಒತ್ತಾಯದಿಂದ ಅಥವಾ ಅವರ ಅಸಹಾಯಕತೆಯ ದುರ್ಲಾಭ ಪಡೆದು ಮಾಡುವ ಮತಾಂತರವನ್ನು ತಡೆಯುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಚಾರುದತ್ತ ಪಿಂಗಳೆ, ತೆಲಂಗಾಣದ ಎಸ್ಥರ್ ಧನರಾಜ, ಛತ್ತೀಸಗಡದ ಬಿ.ಜೆ.ಪಿ ರಾಜ್ಯ ಘಟಕದ ಕಾರ್ಯದರ್ಶಿ ಪ್ರಬಲ ಪ್ರತಾಪಸಿಂಹ ಜುದೇವ ಮತ್ತು ನೇಪಾಳದ ವಿಶ್ವ ಹಿಂದೂ ಮಹಾಸಂಘದ ಶಂಕರ ಖರೇಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.