ADVERTISEMENT

ಕಾರವಾರಕ್ಕೆ ‘ವಿಸ್ಟಾಡೋಮ್’ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 12:23 IST
Last Updated 14 ಆಗಸ್ಟ್ 2021, 12:23 IST
ವಿಸ್ಟಾಡೋಮ್ ಬೋಗಿಯ ದೃಶ್ಯ
ವಿಸ್ಟಾಡೋಮ್ ಬೋಗಿಯ ದೃಶ್ಯ   

ಕಾರವಾರ: ಯಶವಂತಪುರ– ಕಾರವಾರ ನಡುವೆ ಹಗಲು ರೈಲು (ಸಂಖ್ಯೆ 06211) ಆ.16ರಿಂದ ಪುನಃ ಸಂಚಾರ ಆರಂಭಿಸಲಿದೆ. ಈ ಬಾರಿ ಗಾಜಿನ ಚಾವಣಿ ಹೊಂದಿರುವ ‘ವಿಸ್ಟಾಡೋಮ್’ ಬೋಗಿಗಳು ರೈಲಿನ ಆಕರ್ಷಣೆಯಾಗಿವೆ ಎಂದು ನೈಋತ್ಯ ರೈಲ್ವೆಯು ತಿಳಿಸಿದೆ.

ಈ ಮೊದಲು ಸಂಚರಿಸುತ್ತಿದ್ದ ರೈಲನ್ನು ಪ್ರಯಾಣಿಕರ ಕೊರತೆಯ ಕಾರಣ ನೀಡಿ ಕಾರವಾರದ ಬದಲು ಮಂಗಳೂರಿಗೆ ಸೀಮಿತಗೊಳಿಸಲಾಗಿತ್ತು. ಅಲ್ಲಿಂದಲೇ ಮರು ಪ್ರಯಾಣ(ರೈಲು ಸಂಖ್ಯೆ 06212) ಶುರುವಾಗುತ್ತಿತ್ತು.

ಆ.17ರಿಂದ ಮುಂದಿನ ಸೂಚನೆಯವರೆಗೆಕಾರವಾರದಿಂದ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ರೈಲಿಗೆ ಉತ್ತರ ಕನ್ನಡದಲ್ಲಿ ಮುರುಡೇಶ್ವರ, ಗೋಕರ್ಣ ಮತ್ತು ಅಂಕೋಲಾದಲ್ಲಿ ನಿಲುಗಡೆಯಿದೆ ಎಂದು ರೈಲ್ವೆ ತಿಳಿಸಿದೆ.

ADVERTISEMENT

ಮುಂಗಾರು ಅವಧಿಯ ವೇಳಾಪಟ್ಟಿಯಂತೆ ರೈಲು ಕಾರವಾರದಿಂದ ಮಂಗಳವಾರ, ಗುರುವಾರ ಹಾಗೂ ಶನಿವಾರ ಯಶವಂತಪುರಕ್ಕೆ ಸಂಚರಿಸಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಕಾರವಾರಕ್ಕೆ ತಲುಪಲಿದೆ. ಒಟ್ಟು 14 ಬೋಗಿಗಳಲ್ಲಿ ಎರಡು ವಿಸ್ಟಾಡೋಮ್, ಒಂದು ಹವಾನಿಯಂತ್ರಿತ, ಒಂಬತ್ತು ಸಾಮಾನ್ಯ ಬೋಗಿಗಳು ಇರಲಿವೆ.

ಪ್ರಯಾಣಿಕರಿಂದ ಬೇಡಿಕೆಯಿದ್ದರೂ ರೈಲಿನ ಸಂಚಾರವನ್ನು ಮಂಗಳೂರುವರೆಗೆ ಸೀಮಿತಗೊಳಿಸಿದ್ದ ನೈಋತ್ಯ ರೈಲ್ವೆಯ ಕ್ರಮಕ್ಕೆ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಕಾರವಾರದಿಂದ ಪ್ರಯಾಣಿಸುವ ರೈಲಿಗೆ ವಿಸ್ಟಾಡೋಮ್ ಬೋಗಿ ಅಳವಡಿಸುವಂತೆಯೂ ಬೇಡಿಕೆ ವ್ಯಕ್ತವಾಗಿತ್ತು. ಇದಕ್ಕೆ ಸ್ಪಂದನೆ ಸಿಕ್ಕಿರುವ ಕಾರಣ, ಪ್ರವಾಸಿಗರಿಗೆ ರೈಲಿನಲ್ಲಿ ಸಂಚರಿಸುತ್ತಲೇ ಕಾಡು, ಸಮುದ್ರ, ನದಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಒದಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.