ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ 2021ರ ಜುಲೈನಲ್ಲಿ ಭೂಕುಸಿತ ಸಂಭವಿಸಿ ಅಡಿಕೆ ತೋಟ ಸಂಪೂರ್ಣ ನಾಶವಾಗಿತ್ತು.
ಸಂಗ್ರಹ ಚಿತ್ರ
ಕಾರವಾರ: ಪಶ್ಚಿಮ ಘಟ್ಟವನ್ನೇ ಬಹುಪಾಲು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ದಶಕದಿಂದ ಈಚೆಗೆ ಭೂಕುಸಿತದ ಘಟನೆಗಳು ಹೆಚ್ಚುತ್ತಲೇ ಇವೆ. ನೆಲ ಕುಸಿದು ನೆಲೆ ಕಳೆದುಕೊಂಡ ಜನರಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ.
2009 ರಿಂದ ಈವರೆಗೆ ಜಿಲ್ಲೆಯಲ್ಲು ಸುಮಾರು 10ಕ್ಕೂ ಹೆಚ್ಚು ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾದ ಘಟನೆ ನಡೆದಿದೆ. 39 ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ನೂರಾರು ಎಕರೆ ಕೃಷಿ ಭೂಮಿ, ವಸತಿ ಪ್ರದೇಶ ಅವಶೇಷವಾಗಿವೆ. ಸರ್ಕಾರ ಜೀವಹಾನಿಗೆ ಪರಿಹಾರ ನೀಡಿರುವುದನ್ನು ಹೊರತುಪಡಿಸಿದರೆ ಕಳೆದುಕೊಂಡ ನೆಲಕ್ಕೆ ಪರ್ಯಾಯ ವ್ಯವಸ್ಥೆ ಸಿಕ್ಕಿಲ್ಲ ಎಂಬುದು ಸಂತ್ರಸ್ತರ ದೂರು.
2009ರಲ್ಲಿ ಕಾರವಾರ ತಾಲ್ಲೂಕಿನ ಕಡವಾಡದಲ್ಲಿ ಗುಡ್ಡ ಕುಸಿದು 19 ಮಂದಿ ಮೃತಪಟ್ಟಿದ್ದು ಜಿಲ್ಲೆಯ ಈವರೆಗಿನ ಘೋರ ದುರಂತ ಎಂಬುದಾಗಿ ದಾಖಲಾಗಿದೆ. ಆ ಬಳಿಕ ಕೆಲವೇ ವರ್ಷದಲ್ಲಿ ಹೊನ್ನಾವರದಲ್ಲಿ ಕೊಂಕಣ ರೈಲ್ವೆಯ ಸುರಂಗ ಕಾಮಗಾರಿ ನಡೆಯುವ ವೇಳೆ ಕುಸಿತ ಸಂಭವಿಸಿ ಏಳು ಮಂದಿ ಮೃತರಾಗಿದ್ದರು. 2017ರಲ್ಲಿ ಕುಮಟಾ ತಾಲ್ಲೂಕಿನ ತಂಡ್ರಕುಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಂಚಿನ ಭೂಮಿ ಕುಸಿದು ಮೂವರು ಮಕ್ಕಳು ಮೃತರಾಗಿದ್ದರು. 2021ರ ಜುಲೈನಲ್ಲಿ ಯಲ್ಲಾಪುರದ ಕಳಚೆಯಲ್ಲಿ ಕುಸಿತ ಸಂಭವಿಸಿ ಓರ್ವರು, 2022ರಲ್ಲಿ ಭಟ್ಕಳದ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ನಾಲ್ವರು ಮತ್ತು ಅಂಕೋಲಾದ ಶಿರೂರಿನಲ್ಲಿ ಜುಲೈ 16 ರಂದು ಗುಡ್ಡ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ.
‘ಗುಡ್ಡ ಕುಸಿದು ಜೀವಹಾನಿ ಆಗಿದ್ದಕ್ಕೆ ಸರ್ಕಾರ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಿ ಕಣ್ಣೀರು ಒರೆಸಿತು. ಆದರೆ, ಅವಘಡದಲ್ಲಿ ಜೀವನಕ್ಕೆ ಆಸರೆಯಾಗಿದ್ದ ನೆಲವನ್ನೇ ಕಳೆದುಕೊಂಡ ನೂರಾರು ಕುಟುಂಬಗಳಿಗೆ ಇಂದಿಗೂ ಪರ್ಯಾಯ ವ್ಯವಸ್ಥೆಯನ್ನಾಗಲಿ, ಪರಿಹಾರವನ್ನಾಗಲಿ ನೀಡುವ ಕೆಲಸ ನಡೆದಿಲ್ಲ. ಕಳಚೆ, ಮತ್ತಿಘಟ್ಟ, ಕಡವಾಡ ಸೇರಿ ಕೆಲವೆಡೆ ಭೂಕುಸಿತದಿಂದ ರೈತರ ತೋಟ, ಗದ್ದೆ ಅವಶೇಷವಾಗಿದೆ. ಅದಕ್ಕೆ ಪರ್ಯಾಯವಾಗಿ ಬೇರೆ ಜಾಗ ಕೊಡುವ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಾರಾಯಣ ಹೆಗಡೆ.
‘ಯಲ್ಲಾಪುರದ ಕಳಚೆಯಲ್ಲಿ ಹತ್ತಾರು ಎಕರೆ ಕೃಷಿಭೂಮಿ ನಾಶವಾಗಿದ್ದಾಗ ರೈತರಿಗೆ ಪರ್ಯಾಯ ವ್ಯವಸ್ಥೆಗೆ ಭೂಮಿ ಹುಡುಕಲು ಪ್ರಯತ್ನ ನಡೆಯಿತು. ಆದರೆ ಸೂಕ್ತ ಜಾಗ ಸಿಗಲಿಲ್ಲ. ಬಹುತೇಕ ಭೂಕುಸಿತ ಪ್ರಕರಣದಲ್ಲಿ ಪರ್ಯಾಯ ಭೂಮಿ ಕಲ್ಪಿಸಲು ನಿಯಮಾವಳಿಯಲ್ಲಿ ಅವಕಾಶವಿಲ್ಲದಿರುವುದು ಸಮಸ್ಯೆಯಾಗಿದೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡವರಿಗೆ ಪರ್ಯಾಯ ನೆಲೆ ಸಿಗಲಿಲ್ಲ. ನೀರಾವರಿ ವ್ಯವಸ್ಥೆಯೇ ನಾಶವಾಗಿದ್ದಕ್ಕೆ ಇದ್ದ ತೋಟಗಳೂ ಹಾಳಾಗಿವೆ. ಸರ್ಕಾರ ಈಗಲಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ– ವೆಂಕಟರಮಣ ಬೆಳ್ಳಿ, ಕಳಚೆ ನಿವಾಸಿ
ಕುಮಟಾದ ತಂಡ್ರಕುಳಿಯಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾದ ಜನರಿಗೆ ಪರ್ಯಾಯ ಭೂಮಿ ಒದಗಿಸುವ ಕೆಲಸ ನಡೆದಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ಜನ ಸಂಬಂಧಿಕರ ಮನೆಯಲ್ಲಿ ಉಳಿಯುತ್ತಿದ್ದಾರೆ.– ಆರ್.ಕೆ.ಅಂಬಿಗ, ದೀವಗಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.