ಕಾರವಾರ: ‘ಜಿಲ್ಲೆಯಲ್ಲಿನ ಎಲ್ಲ 229 ಗ್ರಾಮ ಪಂಚಾಯಿತಿಗಳು ಹಾಗೂ ಅವುಗಳ ವ್ಯಾಪ್ತಿಯಲ್ಲಿನ ಶಾಲೆ, ಅಂಗನವಾಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿ ಕೇಂದ್ರಗಳಾಗಿ ರೂಪಿಸುವ ಗುರಿ ಹೊಂದಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಭರವಸೆ ನೀಡಿದರು.
‘ಜಿಲ್ಲೆಯು ಭೌಗೋಳಿಕವಾಗಿ ವಿಸ್ತಾರವಾಗಿದೆ. 38 ಪಿಡಿಒಗಳು, 11 ಗ್ರೇಡ್–1 ಕಾರ್ಯದರ್ಶಿ, 44 ಗ್ರೇಡ್–2 ಕಾರ್ಯದರ್ಶಿ ಹುದ್ದೆಗಳು ಖಾಲಿ ಇವೆ. ಇಂತಹ ಸವಾಲುಗಳ ನಡುವೆಯೂ ಆಡಳಿತ ವ್ಯವಸ್ಥೆ ಸುಗಮವಾಗಿಸಿಕೊಂಡು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತೇನೆ’ ಎಂದು ಶನಿವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜಿಲ್ಲಾ ಪಂಚಾಯಿತಿಯಲ್ಲಿ ಆಡಳಿತ ನಡೆಸಲು ಜನಪ್ರತಿನಿಧಿಗಳ ಸಮಿತಿ ಸದ್ಯಕ್ಕೆ ಇಲ್ಲದಿದ್ದರೂ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹರಿಸಲು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಂದ, ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಎಲ್ಲರಿಗೂ ಸೂಚಿಸಲಾಗಿದೆ. ಜನರು ದೂರುಗಳಿದ್ದರೆ ನೇರವಾಗಿ ತಮ್ಮ ಗಮನಕ್ಕೆ ತರಬಹುದು’ ಎಂದರು.
‘ನರೇಗಾ, ಸ್ವಚ್ಛ ಭಾರತ ಮಿಷನ್, ಜಲ ಜೀವನ್ ಮಿಷನ್ ಯೋಜನೆ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳ ಗುರಿ ಸಾಧನೆಯ ಸ್ಥಿತಿಗತಿ ಕುರಿತು ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ’ ಎಂದರು.
‘ಪರಿಸರ ಪೂರಕ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿಯಿಂದ ರೂಪಿಸಲಾಗಿರುವ ಯೋಜನೆಗಳು ಸೇರಿದಂತೆ ಈ ಹಿಂದಿನ ಸಿಇಒಗಳು ಅನುಷ್ಠಾನಗೊಳಿಸಿದ ಎಲ್ಲ ಯೋಜನೆಗಳು ಅಡೆತಡೆ ಇಲ್ಲದೆ ಮುಂದುವರೆಯಲಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಅಲ್ಲಾಬಕ್ಷ್, ಪ್ರಕಾಶ ಹಾಲಮ್ಮನವರ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೆಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಯೋಜನಾ ನಿರ್ದೇಶಕ ಕರೀಂ ಅಸದಿ ಪಾಲ್ಗೊಂಡಿದ್ದರು.
ಉತ್ತರ ಕನ್ನಡದಲ್ಲಿ ರಾಜ್ಯಕ್ಕೆ ಮಾದರಿಯಾಗುವ ಯೋಜನೆ ಅನುಷ್ಠಾನಕ್ಕೆ ಯೋಜಿಸಲಾಗುವುದುಡಾ.ದಿಲೀಷ್ ಶಶಿ ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.