
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ರೈತರ ಆರ್ಥಿಕ ಶಕ್ತಿಯಾಗಿರುವ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದ ಕಾರಣ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಚಿಂತೆ ಹೆಚ್ಚಿದೆ. ಈಗಾಗಲೇ ಸಾಲದ ಅರ್ಜಿ ಸ್ವೀಕಾರವಾಗಿ ಹಣ ಮಂಜೂರಾತಿ ಪ್ರಕ್ರಿಯೆ ನಡೆಯಬೇಕಿತ್ತಾದರೂ ಇನ್ನೂ ಅಂಥ ಚಟುವಟಿಕೆ ನಡೆಯದಿರುವುದು ಇದಕ್ಕೆ ಕಾರಣವಾಗಿದೆ.
ಕೆಡಿಸಿಸಿ ಬ್ಯಾಂಕ್‍ಗೆ ಅಕ್ಟೋಬರ್ 25ರಂದು ಚುನಾವಣೆ ಪ್ರಕ್ರಿಯೆಗಳು ಮುಗಿದಿದ್ದು, ಡಿಸೆಂಬರ್ ಕೊನೇಯ ವಾರದಲ್ಲೂ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಎಲ್ಲ 16 ಸ್ಥಾನಗಳ ಮತ ಎಣಿಕೆ ಪೂರ್ಣಗೊಳ್ಳದವರೆಗೂ ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 16 ನಿರ್ದೇಶಕ ಸ್ಥಾನದಲ್ಲಿ 14 ಸ್ಥಾನಗಳ ಮತ ಎಣಿಕೆ ಮುಗಿದು ಫಲಿತಾಂಶ ಈಗಾಗಲೇ ಪ್ರಕಟಗೊಂಡಿದೆ. 10 ಸ್ಥಾನಗಳಲ್ಲಿ ಕಳೆದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಹಾಲೀ ನಿರ್ದೇಶಕ, ಶಾಸಕ ಶಿವರಾಮ ಹೆಬ್ಬಾರ ಬೆಂಬಲಿಗರು, 4 ಸ್ಥಾನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹಾಲೀ ನಿರ್ದೇಶಕ ಮಂಕಾಳ ವೈದ್ಯ ಬೆಂಬಲಿಗರು ಮುಂಚೂಣಿಯಲ್ಲಿದ್ದಾರೆ. 2 ಪ್ರಕರಣಗಳು ಕೋರ್ಟ್ ಅಂಗಳದಲ್ಲಿರುವ ಕಾರಣಕ್ಕೆ ಆಡಳಿತ ಮಂಡಳಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.
‘ಕೆಡಿಸಿಸಿ ಬ್ಯಾಂಕ್‍ನಲ್ಲಿ ಆಡಳಿತ ಮಂಡಳಿ ವಿಚಾರವಾಗಿ ರೈತರಿಗೆ ಮಾಧ್ಯಮಿಕ ಸಾಲದ ಚಿಂತೆ ಹೆಚ್ಚಿದೆ. ಈವರೆಗೆ ವಾರ್ಷಿಕ ನೂರಾರು ಕೋಟಿಯಷ್ಟು ಮಾಧ್ಯಮಿಕ ಸಾಲ ವಿತರಿಸಲಾಗುತ್ತಿತ್ತು. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಸಾಲ ಮಂಜೂರಾತಿ ನೀಡಲಾಗುತ್ತದೆ. ಆದರೆ ಈ ಬಾರಿ ಸಾಲದ ಅರ್ಜಿ ಕಳಿಸಿದರೂ ಪ್ರಯೋಜನ ಆಗಿಲ್ಲ ಎನ್ನುವಂತಿದೆ. ವಿಮಾ ಕಂಪನಿಯ ವಿರುದ್ಧವೂ ಹೋರಾಟ ಮಾಡಲು ಆಡಳಿತ ಮಂಡಳಿ ಅಗತ್ಯವಿದೆ. ಅಲ್ಲದೇ, ಇದೇ ರೀತಿ ಮುಂದುವರೆದಲ್ಲಿ ಬೆಳೆ ಸಾಲದ ಸಂದರ್ಭದಲ್ಲೂ ಸಮಸ್ಯೆ ಆಗುವ ಸಾಧ್ಯತೆಯಿದೆ’ ಎಂಬುದು ರೈತ ಮಧುಕೇಶ್ವರ ಗೌಡ ಮಾತಾಗಿದೆ.
‘ಆಡಳಿತ ಮಂಡಳಿ ಅನುಷ್ಠಾನಗೊಳ್ಳದ ಪರಿಣಾಮವಾಗಿ ರೈತರು ಸಮಸ್ಯೆ ಎದುರಿಸಬೇಕಾಗಿದೆ. ಮಾಧ್ಯಮಿಕ ಸಾಲ ಸೇರಿದಂತೆ ಅನೇಕ ಅಗತ್ಯ ಸಾಲಗಳು ದೊರೆಯುತ್ತಿಲ್ಲ. ಸಾಲ ನೀಡದ ಕಾರಣ ಬ್ಯಾಂಕ್‍ನ 74 ಬ್ರಾಂಚುಗಳಲ್ಲಿ ವ್ಯವಹಾರ ಕಡಿಮೆಯಾಗಿದ್ದು, ಬ್ಯಾಂಕಿನಲ್ಲೂ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಕೇವಲ ಮೂರು ತಿಂಗಳಲ್ಲಿ ಆರ್ಥಿಕ ವರ್ಷ ಮುಗಿಯಲಿದ್ದು, ಬ್ಯಾಂಕ್‍ನ ಹಣಕಾಸು ವ್ಯವಹಾರವೇ ಕಡಿಮೆಯಾಗಲಿದೆ’ ಎಂಬುದು ಬ್ಯಾಂಕ್ ಅಧಿಕಾರಿಗಳ ಮಾತಾಗಿದೆ.
‘ಈ ಹಿಂದಿನ ಚುನಾವಣೆಗಳಲ್ಲಿ ತುರುಸು ಇದ್ದರೂ ಸಹ, ಕೋರ್ಟ್‍ದಿಂದ ಮತದಾನದ ಹಕ್ಕು ತಂದರೂ ಸಹ ಮತ ಎಣಿಕೆ ದಿನದಂದೇ ಎಲ್ಲವೂ ಘೋಷಣೆಯಾಗುತ್ತಿತ್ತು. ಆದರೆ ಈ ಬಾರಿ ಬದಲಾದ ರಾಜಕೀಯ ಸನ್ನಿವೇಶ ಹಾಗೂ ಕೆಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಣಮಿಸಿದ ಕಾರಣ ಕೋರ್ಟ್‍ಗೆ ಹೋದ ಪ್ರಕರಣಗಳು ಈ ವರ್ಷ ಜಾಸ್ತಿ ಆಗಿದೆ. ಆಡಳಿತ ಮಂಡಳಿ ರಚನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ರೈತರಿಗೆ ಹಾಗೂ ಬ್ಯಾಂಕಿಗೆ ಇಬ್ಬರಿಗೂ ತೊಂದರೆ ಖಚಿತವಾಗಿದೆ. ಕಾರಣ ಆದಷ್ಟು ಶೀಘ್ರದಲ್ಲಿ ಆಡಳಿತ ಮಂಡಳಿ ರಚನೆಯಾಗಬೇಕಿದೆ’ ಎಂಬುದು ರೈತ ವಲಯದ ಆಗ್ರಹವಾಗಿದೆ.
ಕೋರ್ಟ್ ಆದೇಶಕ್ಕಾಗಿ ಕಾಯಲಾಗುತ್ತಿದೆ: ’ಸಿದ್ದಾಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತ ಕ್ಷೇತ್ರ ಹಾಗೂ ಗ್ರಾಹಕರ ಸಹಕಾರಿ ಸಂಘಗಳ ಮತ್ತು ಸಂಸ್ಕರಣಾ ಸಹಕಾರಿ ಸಂಘಗಳ ಮತ ಕ್ಷೇತ್ರದ ಮತ ಎಣಿಕೆ ಇನ್ನೂ ನಡೆಯಬೇಕಿದ್ದು ಕೋರ್ಟ್ ಆದೇಶಕ್ಕಾಗಿ ಕಾಯಲಾಗುತ್ತಿದೆ. ಎರಡು ಪ್ರಕರಣ ಬಗೆಹರಿದರೆ ತಕ್ಷಣ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ’ ಎಂಬುದು ಬ್ಯಾಂಕ್ ಅಧಿಕಾರಿಗಳ ಮಾಹಿತಿಯಾಗಿದೆ.
ಈಗಾಗಲೇ ಕೋರ್ಟ್ ಪ್ರಕರಣ ಬಗೆಹರಿಯುವಲ್ಲಿ ಸಾಕಷ್ಟು ವಿಳಂಬವಾಗಿದ್ದು ಇನ್ನಷ್ಟು ವಿಳಂಬವಾದರೆ ರೈತರಿಗೆ ಸಾಲ ವಿತರಣೆಯಲ್ಲಿ ತೊಂದರೆಯಾಗುತ್ತದೆ. ಸಮಸ್ಯೆ ಆದಷ್ಟು ಬೇಗ ಬಗೆಹರಿದಲ್ಲಿ ಮಾತ್ರ ಅನುಕೂಲ ಆಗಲಿದೆ.–ಶಿವರಾಮ ಹೆಬ್ಬಾರ, ಶಾಸಕ ಕೆಡಿಸಿಸಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.