ಶಿರಸಿ: ‘ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯಲ್ಲಿ ನಾಮಪತ್ರಗಳ ಪರಿಶೀಲನೆ, ಸ್ವೀಕೃತಿ, ತಿರಸ್ಕಾರ ಸೇರಿ ಯಾವುದೇ ವಿಷಯದಲ್ಲೂ ಅಧಿಕಾರದ ಹಾಗೂ ಅಧಿಕಾರಿಗಳ ಸಹಾಯ ಅಥವಾ ದುರ್ಬಳಕೆಗೆ ಅವಕಾಶವಿಲ್ಲ’ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಬ್ಯಾಂಕ್ ಚುನಾವಣೆ ಇತಿಹಾಸದಲ್ಲಿ ಅಧಿಕಾರ ದುರ್ಬಳಕೆ ಇದುವರೆಗೂ ಆಗಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಲೋಪವಾಗಬಾರದು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಅವರ ಜತೆಗೂ ಮಾತನಾಡಿದ್ದೇನೆ’ ಎಂದರು.
‘ಚುನಾವಣಾಧಿಕಾರಿ ಕೆ.ವಿ. ಕಾವ್ಯಾರಾಣಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವವರಿಂದಲೇ ಕಾನೂನು ಸಲಹೆಗಳನ್ನು ಪಡೆದುಕೊಳ್ಳುತ್ತಿರುವುದು ಸರಿಯಲ್ಲ. ಜಂಟಿ ನಿರ್ದೇಶಕರಿಂದ ಅವರು ಚುನಾವಣಾಧಿಕಾರಿ ಸಲಹೆ ಪಡೆದುಕೊಳ್ಳಲಿ. ನಿಷ್ಪಕ್ಷಪಾತ, ನಿರ್ಭೀತಿಯಿಂದ ಚುನಾವಣೆ ನಡೆಯುವ ವಾತಾವರಣವನ್ನು ಅಧಿಕಾರಿಗಳು ನಿರ್ಮಿಸುತ್ತಾರೆ ಎಂಬ ಭರವಸೆ ಇದೆ’ ಎಂದರು.
‘ಕೆಡಿಸಿಸಿ ಬ್ಯಾಂಕ್ ಆರ್‌ಬಿಐ ಅಡಿಯಲ್ಲಿದೆ. ಬ್ಯಾಂಕು ಪ್ರತಿ ವರ್ಷ ಲೆಕ್ಕ ಪರಿಶೋಧನೆಗೆ ಒಳಗಾಗುತ್ತಿದೆ. ಪ್ರತಿಯೊಂದು ವಿಭಾಗವನ್ನೂ ಪರಿಶೀಲನೆ ಮಾಡಲಾಗುತ್ತದೆ. ಕದ್ದುಮುಚ್ಚಿ ಯಾವ ವ್ಯವಹಾರವನ್ನೂ ಮಾಡಲು ಸಾಧ್ಯವಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪಗಳು ಸಾಮಾನ್ಯವಾಗಿದ್ದು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದರೆ ಒಳ್ಳೆಯ ಬೆಳವಣಿಗೆ. ಅದಕ್ಕೆ ಇತರ ಆಕಾಂಕ್ಷಿಗಳ ಸಹ ಮತವೂ ಬೇಕು. ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.