ADVERTISEMENT

ಸಾಲಮನ್ನಾ: ₹ 7.85 ಕೋಟಿ ಬಡ್ಡಿ ನಷ್ಟ: ಎಸ್.ಎಲ್.ಘೋಟ್ನೇಕರ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 12:15 IST
Last Updated 17 ಸೆಪ್ಟೆಂಬರ್ 2019, 12:15 IST
ಶಂಕರ ಭಟ್ಟ
ಶಂಕರ ಭಟ್ಟ   

ಶಿರಸಿ: ರೈತರ ಸಾಲಮನ್ನಾ ಯೋಜನೆಯಡಿ ಸರ್ಕಾರದಿಂದ ಬರಬೇಕಾಗಿರುವ ಬಾಕಿ ಹಣದ ಬಡ್ಡಿ ನಷ್ಟದಿಂದ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿಗೆ (ಕೆಡಿಸಿಸಿ) ₹ 7.85 ಕೋಟಿ ಹಾನಿಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ್ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ಕಂತುಗಳಲ್ಲಿ ಹಣ ಬಂದಿದೆ. ಇನ್ನೂ 29112 ರೈತರಿಗೆ ₹ 214.53 ಕೋಟಿ ಮೊತ್ತ ಸರ್ಕಾರದಿಂದ ಬರಬೇಕಾಗಿದೆ. ಕಳೆದ ಏಪ್ರಿಲ್‌ನಿಂದ ಆರ್ಥಿಕ ವರ್ಷದ ಅಂತ್ಯದವರೆಗೆ ಸರ್ಕಾರದಿಂದ ಬರಬೇಕಾಗಿರುವ ಸಾಲಮನ್ನಾ ಹಣದಿಂದ ಬ್ಯಾಂಕಿಗೆ ಬಡ್ಡಿ ಹಣ ನಷ್ಟವಾಗಿದೆ’ ಎಂದರು.

ಆರ್ಥಿಕ ವರ್ಷದ ಅಂತ್ಯದಲ್ಲಿ ಬ್ಯಾಂಕ್ ₹ 8.38 ಕೋಟಿ ನಿಕ್ಕಿ ಲಾಭಗಳಿಸಿದೆ. ಶೇರು ಬಂಡವಾಳ ₹ 58.57 ಕೋಟಿಯಿಂದ ₹ 69.87 ಕೋಟಿಗೆ, ನಿಧಿ ₹ 116.35 ಕೋಟಿಯಿಂದ ₹ 122.06 ಕೋಟಿಗೆ, ಠೇವು ₹ 1826.75 ಕೋಟಿಯಿಂದ ₹ 20201.42 ಕೋಟಿಗೆ ಏರಿಕೆಯಾಗಿದೆ. ಒಟ್ಟು ಆದಾಯ ₹ 194.79 ಕೋಟಿ ತಲುಪಿದೆ. ಸಾಲ ಬಾಕಿ ₹ 1734.95 ಕೋಟಿ, ದುಡಿಯುವ ಬಂಡವಾಳ ₹ 2717.04 ಕೋಟಿಯಷ್ಟಿದೆ ಎಂದು ವಿವರಿಸಿದರು.

ADVERTISEMENT

ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆ ಅನ್ವಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಜಿಲ್ಲೆಯ ರೈತರಿಗೆ ಕೃಷಿ ಸಾಲ ವಿತರಿಸಲಾಗಿದೆ. ಹೊರಬಾಕಿ ಇರುವ ಅಲ್ಪಾವಧಿ ಕೃಷಿ ಸಾಲಗಳಿಗೆ ಸಂಬಂಧಿಸಿ ಜಿಲ್ಲೆಯ 86,815 ರೈತರಿಗೆ ₹ 520 ಕೋಟಿ ಸಾಲ ಮನ್ನಾ ಸಿಗುವ ಅವಕಾಶವಿದೆ. ಕೃಷಿ ಚಟುವಟಿಕೆಗಳ ನಿರ್ವಹಣೆಯಲ್ಲಿ ಗಣನೀಯ ಏರಿಕೆಯಾಗಿರುವುದನ್ನು ಮನಗಂಡು ವಿವಿಧ ಬೆಳೆಗಳಿಗೆ ನೀಡುವ ಬೆಳೆಸಾಲದ ಎಕರೆವಾರು ಮಿತಿಯನ್ನು ಹೆಚ್ಚಿಸಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಬಡ್ಡಿ ರಿಯಾಯಿತಿ ಯೋಜನೆಯಡಿ ₹ 76.14 ಕೋಟಿ ಮೊತ್ತ ಬ್ಯಾಂಕಿಗೆ ಬರಬೇಕಾಗಿದೆ ಎಂದು ಹೇಳಿದರು.

ಮುಂಗಾರು ಹಂಗಾಮಿನ ಫಸಲ್ ಬಿಮಾ ಯೋಜನೆಯಡಿ ಭತ್ತ ಬೆಳೆಗೆ ₹ 19.30 ಕೋಟಿ, ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆಗೆ ₹ 36.31 ಕೋಟಿ ವಿಮಾ ಮೊತ್ತ ರೈತರ ಖಾತೆಗೆ ಜಮಾ ಆಗಿದೆ ಎಂದು ಹೇಳಿದರು. ಬ್ಯಾಂಕಿನ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ನಿರ್ದೇಶಕರಾದ ಜಿ.ಟಿ.ಹೆಗಡೆ ತಟ್ಟೀಸರ, ಜಿ.ಆರ್.ಹೆಗಡೆ ಸೋಂದಾ, ಮೋಹನದಾಸ ನಾಯಕ, ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಬಾಂದುರ್ಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.