ADVERTISEMENT

ಕೆಡಿಪಿ ಸಭೆ | ಜನರನ್ನು ಅಲೆದಾಡಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 2:28 IST
Last Updated 9 ಸೆಪ್ಟೆಂಬರ್ 2025, 2:28 IST
ಭಟ್ಕಳದ ತಾಲ್ಲೂಕು ಪಂಚಾಯಿತಿ ಸಭಾಭವನದಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಮಾತನಾಡಿದರು 
ಭಟ್ಕಳದ ತಾಲ್ಲೂಕು ಪಂಚಾಯಿತಿ ಸಭಾಭವನದಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಮಾತನಾಡಿದರು    

ಭಟ್ಕಳ : ‘ತಹಶೀಲ್ದಾರ್‌ ಕಚೇರಿಯಲ್ಲಿ ಏಜೆಂಟರನ್ನು ಹಿಡಿಯದೇ ಯಾವ ಕೆಲಸವೂ ಆಗುವುದಿಲ್ಲ ಎನ್ನುವ ಸ್ಥಿತಿ ಜನಸಾಮಾನ್ಯರದ್ಧಾಗಿದೆ. ಸಣ್ಣಪುಟ್ಟ ಕೆಲಸಗಳಿಗೂ ಜನರು ತಿಂಗಳುಗಟ್ಟಲೆ ತಹಶೀಲ್ದಾರ್‌ ಕಚೇರಿ ಅಲೆದಾಡಬೇಕಿದೆ. ಅಧಿಕಾರಿಗಳು ಜನಸಾಮಾನ್ಯರಿಗೆ ವಿನಾಃ ಕಾರಣ ಸತಾಯಿಸಿದರೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ  ವೈದ್ಯ ಎಚ್ಚರಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಬಂದ ಅರ್ಜಿಗಳನ್ನು ಸರಿಯಾಗಿ ವಿಲೇವಾರಿ ಮಾಡದ ಬಗ್ಗೆ ಹಾಗೂ ವಿಶೇಷಚೇತನರಿಗೆ ಅದರಲ್ಲಿಯೂ ಎಂಡೋಸಲ್ಫಾನ್ ಪೀಡಿತರಿಗೆ ಪಿಂಚಣಿ ಮಂಜೂರಿ ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಅವರು, ಮಾನವೀಯತೆಯಿಂದ ಕೆಲಸ ಮಾಡಿ, ಎಲ್ಲವೂ ಏಜೆಂಟ್ ಮೂಲಕವೇ ಆಗಬೇಕೆ?  ಕಂದಾಯ ಇಲಾಖೆಯೇ ಏಜೆಂಟರಿಗೆ ಮೂಲ ಎನ್ನುವ ಮಾತು ಕೇಳಿ ಬರುತ್ತಿದೆ ಎಂದು ಪ್ರಶ್ನಿಸಿದರು.

ADVERTISEMENT

ವಿನಾಃ ಕಾರಣ ಬಡ ಕೂಲಿಕಾರ್ಮಿಕರ ಅರ್ಜಿಯನ್ನು ರದ್ದುಪಡಿಸಿದರೇ ನಿಮ್ಮ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಕೆಲವು ತಿಂಗಳಿನಿಂದ ವಿದ್ಯುತ್ ಸಂಪರ್ಕ ನೀಡದಿರುವ ಹೆಸ್ಕಾಂ ಎಂಜಿನಿಯರ್‌ ಅವರನ್ನು ಸಚಿವರು  ಪ್ರಶ್ನಿಸಿದರು.ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಎಂಜಿನಿಯರ್ ಮಂಜುನಾಥ ಸಮಜಾಯಿಷಿ ನೀಡಿದರು.

ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಸರಿಯಾದ ಕಚೇರಿ ವ್ಯವಸ್ಥೆ ಇಲ್ಲ, ಶಿರಾಲಿಯಲ್ಲಿನ ಹಳೆ ಕಟ್ಟಡದಲ್ಲಿತ್ತು, ಅದು ಶಿಥಿಲವಾಗಿದ್ದರಿಂದ ತಾಲ್ಲೂಕು ಆಸ್ಪತ್ರೆಯ ಒಂದು ಕೋಣೆಯಲ್ಲಿ ಕಚೇರಿ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸನಾ ತಿಳಿಸಿದರು.

ತಾಲ್ಲೂಕು ಆಸ್ಪತ್ರೆಯಲ್ಲಿ  ಸ್ತ್ರೀರೋಗ ತಜ್ಞ ವೈದ್ಯರ ಹುದ್ದೆ ಖಾಲಿ ಇದೆ, ಅಲ್ಲದೇ ಕಣ್ಣಿನ ತಜ್ಞರ ಹುದ್ದೆಯೂ ಖಾಲಿ ಇದೆ ಎಂದು ಪ್ರಭಾರ ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅರುಣ ಹೇಳಿದರು.

‘ಆಸ್ಪತ್ರೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ, ಔಷಧ ಅಗತ್ಯವಿದ್ದಲ್ಲಿ ರಕ್ಷಾ ಕಮಿಟಿಯಿಂದ ಹಣ ಹಾಕಿ ತರಿಸಿಕೊಳ್ಳಿ’ ಎಂದು ಸಚಿವರು ತಿಳಿಸಿದರು.

ಮೂಲಸೌಕರ್ಯದ ಕೊರತೆ ಇರುವ ಗ್ರಾಮ ಪಂಚಾಯಿತಿಯನ್ನು ನಗರಸಭೆಗೆ ಸೇರಿಸಲಾಗಿದೆ. ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಸೌಕರ್ಯದ ಕೊರತೆ ಮನಗಂಡು ಹೆಬಳೆ ಗ್ರಾಮ ಪಂಚಾಯಿತಿಯನ್ನು ನಗರಸಭೆಗೆ ಸೇರಿಸಲಾಗಿದೆಯೇ ಹೊರತು ಯಾರನ್ನು ಮೆಚ್ಚಿಸಲು ಈ ಕೆಲಸ ಮಾಡಿಲ್ಲ.  ಶಿರಾಲಿ, ಮುಂಡಳ್ಳಿ ಹಾಗೂ ಮುಟ್ಟಲ್ಳಿ ಗ್ರಾಮ ಪಂಚಾಯಿತಿಯನ್ನು ಸೇರಿಸಬೇಕು ಎನ್ನುವುದಾದರೇ ಅದಕ್ಕೂ ನಾವು ಸಿದ್ದರಿದ್ದೇವೆ ಎಂದರು.

ಭಟ್ಕಳದಿಂದ ರಾತ್ರಿ 8 ಗಂಟೆ ನಂತರ ಹೊನ್ನಾವರಕ್ಕೆ ತೆರಳಲು ಬಸ್‌ ಬಿಡುವ ವ್ಯವಸ್ಥೆ ಮಾಡಿ ಎಂದು ಸಚಿವರು ಬಸ್‌ ಡಿಪೊ ವ್ಯವಸ್ಥಾಪಕ ದಿವಾಕರ ಅವರಿಗೆ ಸೂಚಿಸಿದರು.

ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ಪುರಸಭಾ ಪ್ರಭಾರ ಅಧ್ಯಕ್ಷ ಅಲ್ತಾಫ್ ಖರೂರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.