ಕಾರವಾರ: ಕಳೆದ ವರ್ಷ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆಯ (ಕೆಎಫ್‍ಡಿ) ಬಾಧೆ ದೂರವಾಗಿದೆ. ಜನರು ಜಾಗೃತರಾಗಿರುವ ಜೊತೆಗೆ ಇಲಾಖೆಯು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಫಲ ನೀಡುತ್ತಿವೆ ಎಂಬುದಾಗಿ ಆರೋಗ್ಯ ಇಲಾಖೆ ಹೇಳಿಕೊಂಡಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದವು. ಐದಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸಿದ್ದಾಪುರದಲ್ಲಿಯೇ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಅಂಕೋಲಾದಲ್ಲಿ ಎರಡು ಪ್ರಕರಣ ವರದಿಯಾಗಿತ್ತು. 2023ರಲ್ಲಿ ಮಂಗನ ಕಾಯಿಲೆ ಅಷ್ಟಾಗಿ ಬಾಧಿಸಿರಲಿಲ್ಲ. 2019ರಿಂದ ಸತತವಾಗಿ ನಾಲ್ಕು ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಮೇ ವರೆಗೆ ಸಿದ್ದಾಪುರ, ಹೊನ್ನಾವರ ಸೇರಿದಂತೆ ಏಳು ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಭೀತಿ ಆವರಿಸಿತ್ತು.
ಮಂಗನ ಕಾಯಿಲೆ ಹೆಚ್ಚಾಗಿ ಹರಡುವ ಡಿಸೆಂಬರ್, ಜನವರಿ ಅವಧಿಯಲ್ಲಿ ಈ ಬಾರಿ ಒಂದೂ ಸೋಂಕಿತ ಪ್ರಕರಣ ವರದಿಯಾಗಿಲ್ಲ. ಈ ಹಿಂದೆ ಕಾಯಿಲೆ ಹರಡಿದ್ದ ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ, ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜ್ವರ ಲಕ್ಷಣ ಕಂಡುಬಂದಿದ್ದ 45 ಜನರ ರಕ್ತ ತಪಾಸಣೆ ನಡೆಸಿದ್ದು, ಅವರಲ್ಲಿ ಕಾಯಿಲೆ ಇರುವುದು ದೃಢಪಟ್ಟಿಲ್ಲ ಎಂಬುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
‘ಮಂಗಗಳು ಮೃತಪಟ್ಟಿರುವುದು ಗಮನಕ್ಕೆ ಬಂದರೆ ತಕ್ಷಣ ಮಾಹಿತಿ ನೀಡುವಂತೆ ಜನರಿಗೆ ಎಚ್ಚರಿಸಲಾಗಿದೆ. ಕಾಡಿನಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರ ಮೂಲಕ ಮಂಗನ ಕಾಯಿಲೆ ಹರಡದಂತೆ ಎಚ್ಚರವಹಿಸುವ ಸಲಹೆಗಳ ಕುರಿತ ಕರಪತ್ರಗಳನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ಹೇಳಿದರು.
‘ಮಂಗನ ಕಾಯಿಲೆ ತಡೆಗೆ ಸದ್ಯ ಕಾಯಿಲೆ ಹರಡುವ ಉಣ್ಣೆಯಿಂದ ರಕ್ಷಣೆ ನೀಡುವ ಡೆಪಾ ತೈಲ ಮಾತ್ರ ಬಳಕೆ ಆಗುತ್ತಿದೆ. ಕಾಯಿಲೆ ಈ ಹಿಂದೆ ಹರಡಿದ್ದ ಸಿದ್ದಾಪುರ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ತೈಲ ಹಂಚಿಕೆ ಮಾಡಲಾಗುತ್ತಿದ್ದು, ಈವರೆಗೆ 49,700 ಬಾಟಲ್‌ಗಳಷ್ಟು ತೈಲ ವಿತರಿಸಲಾಗಿದೆ. ಕಾಡು, ಬೆಟ್ಟಕ್ಕೆ ಹೋಗುವವರಿಗೆ ಮೈಗೆ ಡೆಪಾ ತೈಲ ಸವರಿಕೊಂಡು ಹೋಗಲು ತಿಳಿಸಿದ್ದೇವೆ. ರೋಗ ಹರಡಬಹುದಾದ ಉಣ್ಣೆ ಕಚ್ಚದಂತೆ ತೈಲವು ತಡೆಯುತ್ತದೆ’ ಎಂದೂ ವಿವರಿಸಿದರು.
‘ಮಂಗನ ಕಾಯಿಲೆಯಿಂದ ಬಾಧಿತವಾದ ಪ್ರದೇಶದ ಜನರು ಎಚ್ಚೆತ್ತುಕೊಂಡಿದ್ದಾರೆ. ಕಾಯಿಲೆಯಿಂದ ಕಳೆದ ಕೆಲ ವರ್ಷಗಳಲ್ಲಿ ಇಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದರು. ತಪ್ಪು ಮರುಕಳಿಸದಂತೆ ಎಚ್ಚರವಹಿಸಲಾಗುತ್ತಿದೆ’ ಎಂದು ಸಿದ್ದಾಪುರ ತಾಲ್ಲೂಕು ಬಾಳಗೋಡಿನ ಮಂಜುನಾಥ ಭಟ್ ತಿಳಿಸಿದರು.
ಮಂಗನ ಕಾಯಿಲೆ ಹರಡಬಹುದಾಗಿದ್ದ ಸಂಭಾವ್ಯ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಕಾಯಿಲೆ ಹರಡದಂತೆ ಜಾಗೃತಿ ಮೂಡಿಸುತ್ತಿದ್ದಾರೆಡಾ.ನೀರಜ್ ಬಿ.ವಿ. ಜಿಲ್ಲಾ ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.