ADVERTISEMENT

ಕಾಳಿ ತಟದಲ್ಲಿ ಖಾಪ್ರಿ ದೇವರ ಉತ್ಸವ

ಮದ್ಯ, ಸಿಗರೇಟು ನೈವೇದ್ಯ ಪಡೆಯುವ ದೇವರ ವಿಶಿಷ್ಟ ಜಾತ್ರೆ

ಸದಾಶಿವ ಎಂ.ಎಸ್‌.
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ಕಾರವಾರದ ಕೋಡಿಬಾಗದಲ್ಲಿರುವ ಖಾಪ್ರಿ ದೇವರ ವಿಗ್ರಹ
ಕಾರವಾರದ ಕೋಡಿಬಾಗದಲ್ಲಿರುವ ಖಾಪ್ರಿ ದೇವರ ವಿಗ್ರಹ   

ಕಾರವಾರ: ಕಾಳಿ ನದಿಯ ಸಮೀಪದಲ್ಲೇ ಇರುವ ಈ ದೇವಸ್ಥಾನ ಪ್ರತಿವರ್ಷ ವಿಶಿಷ್ಟ ಜಾತ್ರೆಯಿಂದ ಗಮನ ಸೆಳೆಯುತ್ತದೆ. ಎಲ್ಲೆಡೆ ದೇವರಿಗೆ ಫಲ, ತಾಂಬೂಲ, ಹಣ್ಣು, ಕಾಯಿ ಅರ್ಪಿಸಿದರೆ, ಇಲ್ಲಿ ಮದ್ಯ, ಸಿಗರೇಟನ್ನೂ ನೈವೇದ್ಯ ಮಾಡಲಾಗುತ್ತದೆ.

ಹೌದು, ನಗರದ ಕೋಡಿಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಖಾಪ್ರಿ ದೇವಸ್ಥಾನ ಈ ಕಾರಣದಿಂದಲೂ ‍ಪ್ರಸಿದ್ಧವಾಗಿದೆ. ದೇವಸ್ಥಾನದಲ್ಲಿ ಏ.18ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಕಾರವಾರದಲ್ಲಿ ನೆಲೆಸಿದ್ದರೂ ಈ ದೇವರ ಮೂಲ ದಕ್ಷಿಣ ಆಫ್ರಿಕಾ ಎಂದು ನಂಬಲಾಗಿದೆ. ನೂರಾರು ವರ್ಷಗಳ ಹಿಂದೆ ಕೋಡಿಬಾಗಕ್ಕೆ ಆ ದೇಶದಿಂದ ಖಾಪ್ರಿ ಎಂಬ ಸಂತನೊಬ್ಬ ಬಂದಿದ್ದರಂತೆ. ಸಮೀಪದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ದಿವ್ಯ ಶಕ್ತಿಯಿಂದ ಹಲವು ತೊಂದರೆಗಳು ನಿವಾರಣೆಯಾದವಂತೆ. ಇದು ಸ್ಥಳೀಯರಲ್ಲಿ ಅವರ ಬಗ್ಗೆ ದೈವಿಕ ಭಾವನೆ ಮೂಡಿಸಿತು. ಅವರ ನಿಧನಾನಂತರ ಸುಂದರವಾದ ಗುಡಿಯನ್ನು ಅವರ ಅನುಯಾಯಿಗಳು ನಿರ್ಮಿಸಿದರು. ಅಲ್ಲಿ ಅವರ ನೆನಪಿನಲ್ಲಿ ಪೂಜೆ ಸಲ್ಲಿಸುತ್ತ, ಜಾತ್ರೆ ಮಹೋತ್ಸವಗಳನ್ನು ಆಚರಿಸುತ್ತ ಬರಲಾಗುತ್ತಿದೆ ಎಂದು ಅರ್ಚಕರು ತಿಳಿಸುತ್ತಾರೆ.

ADVERTISEMENT

ದೇವಸ್ಥಾನದ ಬಾಗಿಲು ನಿತ್ಯವೂ ತೆರೆದಿದ್ದು, ಪ್ರತಿದಿನ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿದೆ. ನಿತ್ಯವೂ ಭಕ್ತರು ಬಂದು ನಮಸ್ಕರಿಸಿ ಹರಕೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಜಾತ್ರೆಯ ಸಂದರ್ಭದಲ್ಲಿ ಮಾತ್ರ ಭಕ್ತರು ದೇವರ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಾರೆ. ಸಾಮಾನ್ಯವಾಗಿ ಮಧ್ಯಾಹ್ನ 12.30ರ ಮಹಾಪೂಜೆಯ ನಂತರ ದೇವರದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲಾಗುತ್ತದೆ.

ಹಣ್ಣು, ಕಾಯಿ, ಹೂವಿನ ಜತೆಗೆ ಹಲವರು ಮದ್ಯದ ಬಾಟಲಿ ಹಾಗೂ ಸಿಗರೇಟನ್ನು ನೈವೇದ್ಯವಾಗಿ ದೇವರಿಗೆ ಸಲ್ಲಿಸುತ್ತಾರೆ. ಸರ್ವಾಲಂಕೃತ ದೇವರ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಅರ್ಚಕರು, ಮರೆಯಲ್ಲಿರುವ ದೇವರ ಚಿಕ್ಕ ಮೂರ್ತಿಗೆ ಮದ್ಯವನ್ನು ಅಭಿಷೇಕ ಮಾಡುತ್ತಾರೆ.

ಮತ್ತೊಂದು ವಿಶೇಷವೆಂದರೆ, ಇದು ಸರ್ವಧರ್ಮ ಸಮನ್ವಯ ಕೇಂದ್ರದಂತೆಯೂ ಕಾರ್ಯ ನಿರ್ವಹಿಸುತ್ತಿದೆ. ಜಾತ್ರೆಗೆ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮೀಯರೂ ಬರುತ್ತಾರೆ. ಕರ್ಪೂರ, ಸಕ್ಕರೆ, ಅಗರಬತ್ತು, ಮೇಣದಬತ್ತಿಯನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ಅಪರೂಪಕ್ಕೆ ಕೋಳಿ ಬಲಿಯೂ ಇರುತ್ತದೆ.

‘ದೇವಸ್ಥಾನವು ಕಾಳಿ ನದಿ ಸೇತುವೆಯ ಅಂಚಿನಲ್ಲಿಯೇ ಇದೆ. ಖಾಪ್ರಿ ದೇವರು ರಸ್ತೆ ಅಪಘಾತ ತಡೆಯುತ್ತಾನೆ, ಸಾವು ನೋವು ಆಗದಂತೆ ಕಾಯುತ್ತಾನೆ ಎಂಬ ನಂಬಿಕೆ ಎಲ್ಲರದ್ದಾಗಿದೆ. ಲೋಕ ಕಲ್ಯಾಣಕ್ಕಾಗಿ ಜಾತ್ರೆಯ ವೇಳೆ ವಿಶೇಷ ಪೂಜೆ ಮಾಡಿಸಿ, ನೈವೇದ್ಯ ಸಮರ್ಪಿಸುತ್ತೇನೆ’ ಎನ್ನುತ್ತಾರೆ ಸ್ಥಳೀಯ ರಮೇಶ ನಾಯ್ಕ.

ಕೊರೊನಾ ಕರಿನೆರಳು

ಕಳೆದ ವರ್ಷ ಕೊರೊನಾ ಕಾರಣದಿಂದ ಖಾಪ್ರಿ ಜಾತ್ರೆ ರದ್ದಾಗಿತ್ತು. ಈ ಬಾರಿಯೂ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಸರ್ಕಾರವು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾಗಾಗಿ ಮಹೋತ್ಸವವು ಸರಳವಾಗಿ ನೆರವೇರುವ ಸಾಧ್ಯತೆಯಿದೆ. ಸ್ಥಳೀಯ ಭಕ್ತರು ಹಾಗೂ ಸಮೀಪದ ಗೋವಾದ ಭಕ್ತರು ಪ್ರತಿ ವರ್ಷ ಭಾಗವಹಿಸುತ್ತಾರೆ. ಈ ಬಾರಿ ಎಲ್ಲರೂ ಪಾಲ್ಗೊಳ್ಳಲು ಅವಕಾಶ ಸಿಗುವುದು ಅನುಮಾನ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.