ಮಾರಿಕಾಂಬಾ
ಸಿದ್ದಾಪುರ: ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಕೊಂಡ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವನ್ನು 2026ರ ಫೆ. 17ರಿಂದ 24 ರವರೆಗೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ ತಿಳಿಸಿದರು.
ತಾಲ್ಲೂಕಿನ ಕೊಂಡ್ಲಿ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಸಂಜೆ ಅವರು ಮಾತನಾಡಿದರು.
ಫೆ. 10ರಂದು ಅಂಕೆ ಹಾಕುವ ಕಾರ್ಯದೊಂದಿಗೆ ಜಾತ್ರಾ ಧಾರ್ಮಿಕ ವಿಧಿಗಳು ವಿಧ್ಯುಕ್ತವಾಗಿ ಆರಂಭಗೊಳ್ಳಲಿವೆ. ತದನಂತರ ದೇವಿಯ ಪಟ್ಟ ಸೇವೆ ನಡೆಯಲಿದ್ದು, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ನಿಗದಿಪಡಿಸಿದ ಸ್ಥಳಗಳಲ್ಲಿ ಪೂಜೆ ನಡೆಯಲಿದೆ. ದೇವಿಯ ಪಟ್ಟದ ಕೋಣಕ್ಕೆ ಹನ್ನೊಂದು ಗ್ರಾಮಗಳಲ್ಲಿ ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಲಾಗುತ್ತದೆ. ಫೆ. 17ರಂದು ದೇವಿಗೆ ಜೀವ ಕಳೆ ತುಂಬುವ ಮಹತ್ವದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೆರವಣಿಗೆಯಲ್ಲಿ ದೇವಿಯನ್ನು ವೈಭವದಿಂದ ಗದ್ದುಗೆಗೆ ಕರೆತರಲಾಗುವುದು ಎಂದರು.
ಹಿಂದೆ ಪ್ರತಿ ಜಾತ್ರೆಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಕುಸ್ತಿ ಪಂದ್ಯಾವಳಿಯನ್ನು ಕೊರನಾ ಕಾರಣದಿಂದ ನಿಲ್ಲಿಸಲಾಗಿತ್ತು. ಆದರೆ, ಈ ವರ್ಷ ಒಂದು ದಿನದ ಮಟ್ಟಿಗೆ ಕುಸ್ತಿ ಪಂದ್ಯವನ್ನು ಆಯೋಜಿಸಲಾಗಿದೆ. ದೇವಸ್ಥಾನದ ಕಟ್ಟಡ ಮರು ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ದೇವಿಯ ಭಕ್ತರು ಹಾಗೂ ಇಲ್ಲಿನ ಮೂಲದವರಾಗಿ ಪತಿಯ ಮನೆ ಸೇರಿರುವ ಮಾತೆಯರು ದೇಣಿಗೆ ನೀಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಮೊಕ್ತೇಸರ ರಮೇಶ ರಾಯ್ಕರ, ಪ್ರಧಾನ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಸದಸ್ಯರಾದ ಸುದರ್ಶನ ಪಿಳ್ಳೆ, ಚಂದ್ರಹಾಸ ನಾಯ್ಕ, ಮಾರುತಿ ಕಿಂದ್ರಿ, ರವಿಕುಮಾರ ನಾಯ್ಕ, ಶಿವಾನಂದ ಹೊನ್ನೆಗುಂಡಿ, ಜಿ.ಕೆ.ನಾಯ್ಕ, ನಾರಾಯಣ ಕೊಂಡ್ಲಿ, ಜಗದೀಶ ನಾಯ್ಕ, ರಾಜೇಂದ್ರ ಕಿಂದ್ರಿ, ಆರ್.ಎಂ.ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.