ADVERTISEMENT

ಮುಂಗಾರು ಅವಧಿಗೆ ಕೊಂಕಣ ರೈಲ್ವೆ ಸಜ್ಜು

ಪ್ರಯಾಣಿಕರ ಸುರಕ್ಷತೆಗೆ ವಿವಿಧ ಕ್ರಮಗಳನ್ನು ಜಾರಿ ಮಾಡಿರುವ ನಿಗಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:27 IST
Last Updated 4 ಜೂನ್ 2021, 15:27 IST
ಕೊಂಕಣ ರೈಲ್ವೆಯ ಹಳಿಯನ್ನು ನಿಗಮದ ಸಿಬ್ಬಂದಿ ಪರಿಶೀಲಿಸುತ್ತಿರುವುದು
ಕೊಂಕಣ ರೈಲ್ವೆಯ ಹಳಿಯನ್ನು ನಿಗಮದ ಸಿಬ್ಬಂದಿ ಪರಿಶೀಲಿಸುತ್ತಿರುವುದು   

ಕಾರವಾರ: ಕೊಂಕಣ ರೈಲ್ವೆಯ ಮುಂಗಾರು ವೇಳಾಪಟ್ಟಿಯು ಜೂನ್ 10ರಿಂದ ಅ.31ರವರೆಗೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ರೈಲ್ವೆ ಹಳಿಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ನಿಗಮದ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಗಿರೀಶ ಕರಂಡಿಕರ್, ‘ಮಳೆ ನೀರು ಹರಿದು ಹೋಗುವ ಗಟಾರಗಳ ಸ್ವಚ್ಛತೆ ಮತ್ತು ಹಳಿಯ ಸಮೀಪ ಇರುವ ಗುಡ್ಡಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಕೆಲವು ವರ್ಷಗಳಿಂದ ಸುರಕ್ಷತೆಗಾಗಿ ಕೈಗೊಂಡಿರುವ ಕಾಮಗಾರಿಗಳಿಂದಾಗಿ ಹಳಿಗಳ ಮೇಲೆ ಬಂಡೆ, ಮಣ್ಣು ಬೀಳುವ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ’ ಎಂದು ತಿಳಿಸಿದರು.

‘ಮುಂಗಾರು ಅವಧಿಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ 681 ಸಿಬ್ಬಂದಿ ಗಸ್ತು ನಿರ್ವಹಿಸಲಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ದಿನಪೂರ್ತಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅಂಥ ಸ್ಥಳಗಳಲ್ಲಿ ರೈಲುಗಳಿಗೆ ವೇಗ ಮಿತಿ ಹೇರಲಾಗುವುದು. ಅಗತ್ಯ ಸಂದರ್ಭಗಳಿಗಾಗಿ ಮಣ್ಣು ತೆರವು ಮಾಡುವ ಯಂತ್ರಗಳನ್ನೂ ಸಿದ್ಧವಾಗಿ ಇಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮಳೆ ಜೋರಾಗಿದ್ದಾಗ ರೈಲನ್ನು ಗಂಟೆಗೆ 40 ಕಿಲೋಮೀಟರ್ ಮೀರದ ವೇಗದಲ್ಲಿ ಚಲಾಯಿಸುವಂತೆ ಲೋಕೊ ಪೈಲಟ್‌ಗಳಿಗೆ ಸೂಚನೆ ನೀಡಲಾಗಿದೆ. ಅಪಘಾತ ಪರಿಹಾರ ಮತ್ತು ವೈದ್ಯಕೀಯ ವಾಹನಗಳನ್ನು ರತ್ನಗಿರಿ ಮತ್ತು ವೆರ್ನಾದಲ್ಲಿ ನಿಯೋಜಿಸಲಾಗಿದೆ. ಅವುಗಳಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ವೈದ್ಯಕೀಯ ವ್ಯವಸ್ಥೆಗಳು ಇವೆ. ಅಲ್ಲದೇ ಅಪ‍ಘಾತ ಪರಿಹಾರ ರೈಲನ್ನು ವೆರ್ನಾದಲ್ಲಿ ಇಡಲಾಗಿದೆ’ ಎಂದುತ ಹೇಳಿದರು.

‘ಉಳಿದಂತೆ, ಸಿಬ್ಬಂದಿಗೆ ಮೊಬೈಲ್ ಫೋನ್‌ಗಳು, ಲೋಕೊ ಪೈಲಟ್‌ಗಳು ಮತ್ತು ಭದ್ರತಾ ಸಿಬ್ಬಂದಿಗೆ ವಾಕಿ ಟಾಕಿಗಳನ್ನು ನೀಡಲಾಗಿದೆ. ತುರ್ತು ಸಂವಹನಾ ಸಾಕೆಟ್‌ಗಳನ್ನು ಪ್ರತಿ ಒಂದು ಕಿಲೋಮೀಟರ್‌ಗೆ ಒಂದರಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅಗತ್ಯ ಸಂದರ್ಭಗಳಲ್ಲಿ ಸಿಬ್ಬಂದಿಗೆ ಸಂವಹನ ಸುಲಭವಾಗಲಿದೆ. ಎಲ್ಲ ಮುಖ್ಯ ಸಿಗ್ನಲ್‌ಗಳನ್ನು ಎಲ್.ಇ.ಡಿ ಬಲ್ಬ್‌ಗಳೊಂದಿಗೆ ಬದಲಾಯಿಸಲಾಗಿದೆ’ ಎಂದು ತಿಳಿಸಿದರು.

ಮಳೆ ಮಾಪಕ ಅಳವಡಿಕೆ:ಮಳೆ ಪ್ರಮಾಣವನ್ನು ಸ್ವಯಂ ದಾಖಲಿಸಿಕೊಳ್ಳಬಲ್ಲ ಮಾಪಕಗಳನ್ನು ಒಂಬತ್ತು ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ರಾಜ್ಯದ ಕಾರವಾರ, ಭಟ್ಕಳ ಮತ್ತು ಉಡುಪಿ ನಿಲ್ದಾಣಗಳು ಅವುಗಳಲ್ಲಿ ಸೇರಿವೆ. ಒಂದುವೇಳೆ, ಮಳೆ ಭಾರಿ ಪ್ರಮಾಣದಲ್ಲಿ ಬೀಳುತ್ತಿದ್ದರೆ ಈ ಮಾಪಕಗಳು ಅಧಿಕಾರಿಗಳಿಗೆ ಸಂದೇಶ ರವಾನಿಸಲಿವೆ.

ಕಾರವಾರದ ಕಾಳಿ ನದಿ ರೈಲು ಸೇತುವೆ, ಗೋವಾದ ವಶಿಷ್ಟಿ ನದಿ ಸೇತುವೆ ಹಾಗೂ ಮಹಾರಾಷ್ಟ್ರದ ಸಾವಿತ್ರಿ ನದಿ ಸೇತುವೆಗಳಲ್ಲಿ ಪ‍್ರವಾಹ ಎಚ್ಚರಿಕೆಯ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.