ಶಿರಸಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣ ಕಲಾ ಮಂಡಳದ ಆಶ್ರಯದಲ್ಲಿ ಆ.24ರಂದು ನಗರದ ನೆಮ್ಮದಿ ರಂಗಧಾಮದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಆಯೋಜಿಸಲಾಗಿದೆ ಎಂದು ಸಂಯೋಜಕ ವಾಸುದೇವ ಶಾನಭಾಗ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಕೊಂಕಣಿ ಭಾಷಿಕರ ಸಂಖ್ಯೆ ಅತ್ಯಧಿಕವಾಗಿದೆ. ಇದರಲ್ಲಿ ದೈವಜ್ಞ ಸಮಾಜ, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮಾಜವನ್ನೂ ಒಳಗೊಂಡಂತೆ ಕೊಂಕಣಿ ಮಾತೃಭಾಷೆಯಾದ ಕುಟುಂಬಗಳು ಇಲ್ಲಿವೆ. ಅಂದಾಜಿನ ಪ್ರಕಾರ ಶಿರಸಿ ತಾಲ್ಲೂಕೊಂದರಲ್ಲೇ 5 ಸಾವಿರಕ್ಕೂ ಅಧಿಕ ಕೊಂಕಣಿ ಮಾತೃಭಾಷೆಯಾದ ಕುಟುಂಬಗಳಿವೆ. ಕೊಂಕಣಿ ನಾಟಕಗಳು, ಸಾಹಿತ್ಯ ಪ್ರಸಿದ್ಧಿಯಾಗಿದ್ದರೆ ಇತ್ತೀಚೆಗೆ ಕೊಂಕಣಿ ಚಲನಚಿತ್ರಗಳೂ ತೆರೆ ಕಂಡಿವೆ. ನಾಡಿನ ಸೊಗಡು ಹೊಂದಿರುವ ಕೊಂಕಣಿ ಭಾಷೆಯ ಮಾನ್ಯತಾ ದಿನವನ್ನು ನಗರದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಕೊಂಕಣ ಕಲಾ ಮಂಡಳದ ಸಂಚಾಲಕ ರಾಮು ಕಿಣಿ ಮಾತನಾಡಿ, ಆ.24ರ ಬೆಳಿಗ್ಗೆ 10 ಗಂಟೆಗೆ ನಗರದ ಡಾನ್ ಬೊಸ್ಕೋ ಚರ್ಚನ ಪ್ರಧಾನ ಧರ್ಮದರ್ಶಿ ಪೀಟರ್ ಪಿಂಟೋ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅಧ್ಯಕ್ಷತೆಯನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಆಲ್ವಾರಿಸ್ ವಹಿಸಲಿದ್ದು, ಶಾಸಕ ಭೀಮಣ್ಣ ನಾಯ್ಕ, ವಾಸುದೇವ ಶಾನಭಾಗ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಎಂಎಲ್‍ಸಿ ಶಾಂತಾರಾಮ ಸಿದ್ದಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ ಪಾಲ್ಗೊಳ್ಳುವರು ಎಂದರು.
ಪ್ರಮುಖರಾದ ಜಿ.ಎ. ಹೆಗಡೆ ಸೋಂದಾ, ಚಂದ್ರು ಉಡುಪಿ, ರಾಜನ್ ಕುಮಾರ, ಗಣಪತಿ ಭಟ್, ರೇಷ್ಮಾ ಶೇಟ್ ಇತರರಿದ್ದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ ₹1 ಸಾವಿರ ದ್ವಿತೀಯ ₹800 ತೃತೀಯ ₹500 ಹಾಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲು ನಿರ್ಧರಿಸಿದ್ದೇವೆವಾಸುದೇವ ಶಾನಭಾಗ ಕಾರ್ಯಕ್ರಮ ಸಂಯೋಜಕ
ವಿವಿಧ ಸ್ಪರ್ಧೆಗಳು
ಮಾನ್ಯತಾ ದಿನಾಚರಣೆ ವಿಶೇಷವಾಗಿ ಕೊಂಕಣಿ ಭಾಷಣ ಸ್ಪರ್ಧೆ ಹಾಗೂ ಕೊಂಕಣಿ ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಕೊಂಕಣ ಕವಿ ಗೋಷ್ಠಿ ಆಯೋಜಿಸಲಾಗಿದೆ. ಬಳಿಕ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜಿ.ಎ. ಹೆಗಡೆ ಮತ್ತು ತಂಡದಿಂದ ಕೊಂಕಣಿ ಯಕ್ಷಗಾನ ತಾಳಮದ್ದಲೆ ಶೀಲಾ ಶಾನಭಾಗ ತಂಡದಿಂದ ಕೊಂಕಣಿ ಲೋಕದೇವ ವೈಭವ ಮನೋಜ ಪಾಲೇಕರ್ ತಂಡದಿಂದ ಕೊಂಕಣಿ ಕಲಾ ವೈವಿಧ್ಯ ಸಂದ್ಯಾ ಕುರ್ಡೇಕರ್ ತಂಡದಿಂದ ಕೊಂಕಣಿ ವಿನೋದಾವಳಿ ನಡೆಯಲಿದೆ. ಕೊಂಕಣ ಕಲಾ ಮಂಡಳ ಈಗ 25 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಮಂಡಳದ ಕಾರ್ಯ ಚಟುವಟಿಕೆಯ ಸಂಚಿಕೆಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.