
ಕುಮಟಾ : ಇಲ್ಲಿಯ ಮಹಾತ್ಮಗಾಂಧಿ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ (ಇ.ಪಿ.ಎಲ್) ಹೆಗಡೆ ಪಿ.ಡಿ.ಒ ವಿ.ಎ. ಪಟಗಾರ ಮಾಲೀಕತ್ವದ ಕುಮಟಾ ರೈಸಿಂಗ್ ಸ್ಟಾರ್ ತಂಡ ಚಾಂಪಿಯನ್ ಆಗಿ ಜಯ ಸಾಧಿಸಿತು.
ಕುಮಟಾದ ಎಸ್.ಜಿ. ಸ್ಟೈಕರ್ ತಂಡ ಮೊದಲ ರನ್ನರ್ ಅಪ್ ಹಾಗೂ ಕುಮಟಾ ಟೈರ್ಸ್ ತಂಡ ಎರಡನೇ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡವು. ಮೊದಲ ಮೂರು ಬಹುಮಾನ ಪಡೆದ ತಂಡಗಳಿಗೆ ಕ್ರಮವಾಗಿ ₹ 25, ₹ 15 ಹಾಗೂ ₹ 10 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಪ್ರದೀಪ ನಾಯ್ಕ ಪಂದ್ಯ ಶ್ರೇಷ್ಠ, ಅತ್ಯುತ್ತಮ ಕ್ಯಾಚರ್ ಹಾಗೂ ಗಮನ ಸೆಳೆದ ಆಟಗಾರ, ಸುಬ್ರಹ್ಮಣ್ಯ ಹರಿಕಾಂತ ಭರವಸೆಯ ಆಟಗಾರ, ನಾಗೇಶ ಗೌಡ ಹೆಚ್ಚು ಸಿಕ್ಸರ್ ಹೊಡೆದ ಆಟಗಾರ, ಪ್ರಸನ್ನ ನಾಯ್ಕ ಉತ್ತಮ ಫೀಲ್ಡರ್, ಸುಜನ್ ಉತ್ತಮ ವಿಕೆಟ್ ಕೀಪರ್, ಸುಬ್ರಹ್ಮಣ್ಯ ಹೆಗಡೆ ಉತ್ತಮ ಬ್ಯಾಟ್ಸಮನ್, ಕೃಷ್ಣನಾಯ್ಕ ಉತ್ತಮ ಬೌಲರ್, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಬಹುಮಾನ ವಿತರಿಸಿದ ಜೆಡಿ(ಎಸ್) ಜಿಲ್ಲಾ ಗಟಕದ ಅಧ್ಯಕ್ಷ ಸೂರಜ್ ನಾಯ್ಕ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ ಮಾತನಾಡಿ, ಏಕತಾನತೆಯ ನಿತ್ಯದ ಕಚೇರಿ ಕೆಲಸದಲ್ಲಿ ಕೆಚ್ಚು ಉಲ್ಲಾಸಭರಿತರಾಗಿ ತೊಗಡಿಕೊಳ್ಳಲು ಕ್ರೀಡೆ ಸಹಕಾರಿ. ಎಲ್ಲ ಇಲಾಖೆಯ ಸಿಬ್ಬಂದಿ ಒಂದೆಡೆ ಸೇರಿ ಕ್ರೀಡಾ ಮನೋಭಾವ ಪ್ರದರ್ಶಿಸಿ ಸಂಭ್ರಮಿಸುವುದು ಆರೊಗ್ಯಕರವಾಗಿದೆ ಎಂದರು.
ಬಿ.ಇ.ಒ ಉದಯ ನಾಯ್ಕ, ಕರಾವಳಿ ಕಾವಲು ಪೊಲೀಸ್ ಪಡೆ ಸಿ.ಪಿ.ಐ ಇ.ಸಿ ಸಂಪತ್, ಆರ್.ಎಫ್.ಒ ಪ್ರವೀಣ ನಾಯಕ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ವಿನಾಯಕ ಭಂಡಾರಿ, ಕಾರ್ಯದರ್ಶಿ ಉಮೇಶ ನಾಯ್ಕ, ಪದಾಧಿಕಾರಿ ರಾಘವೆಂದ್ರ ಗಾಂವ್ಕರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.