ಪ್ರಜಾವಾಣಿ ವಾರ್ತೆ
ಕಾರವಾರ: ‘ಕುವೈತ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 33 ಜನರಿಂದ ₹52 ಲಕ್ಷದಷ್ಟು ವಂಚನೆ ಎಸಗಿದವರನ್ನು ಹೊನ್ನಾವರ ಪೊಲೀಸರು ವಿಳಂಬ ಮಾಡದೆ ಬಂಧಿಸಬೇಕು. ವಂಚಕರ ಜಾಲ ಬೇಧಿಸಬೇಕು’ ಎಂದು ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ಮಂಗಳೂರು ಘಟಕದ ಅದ್ಯಕ್ಷ ಸಾದಿಕ್ ತಲ್ಪಾಡಿ ಒತ್ತಾಯಿಸಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇರಳ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಭಾಗದ 33 ಜನರಿಗೆ ಕುವೈತ್‌ನ ಸರ್ಕಾರಿ ಬ್ಯಾಂಕ್, ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಹೊನ್ನಾವರ ತಾಲ್ಲೂಕಿನ ಹೆರಂಗಡಿಯ ಜಾಫರ್ ಸಾದಿಕ್ ಹುಸೇನ್ ಮುಕ್ತೇಸರ, ನೌಶಾದ್ ಖ್ವಾಜಾ ದಾವೂದ್ ಮತ್ತು ಹೈದರಾಬಾದ್‌ನ ಸುಜಾತಾ ಜಮ್ಮಿ ಕುಂತ ಎಂಬುವವರ ವಿರುದ್ಧ ಆ.24 ರಂದು ಹೊನ್ನಾವರ ಠಾಣೆಯಲ್ಲಿ ಕೇರಳದ ವಿಜು ದಾಮೋದರನ್ ದೂರು ನೀಡಿದ್ದರು. ಪ್ರಕರಣವೂ ದಾಖಲಾಗಿದೆ’ ಎಂದರು.
‘ಆರೋಪಿ ಜಾಫರ್ ಕುವೈತ್‌ನಿಂದ ಊರಿಗೆ ಮರಳಿರುವ ಮಾಹಿತಿ ಇದ್ದು ಆತನನ್ನು ಮತ್ತು ಆತನ ಸಹಚರರನ್ನು ವಿಳಂಬ ಮಾಡದೆ ಬಂಧಿಸಲು ಪೊಲೀಸರಿಗೆ ಒತ್ತಾಯಿಸಿದ್ದೇವೆ. ಪ್ರಕರಣ ದಾಖಲಾಗಿ ಒಂದೂವರೆ ತಿಂಗಳಾದರೂ ಕ್ರಮವಾಗಿಲ್ಲ. ವಂಚಕರು ಮತ್ತಷ್ಟು ಜನರನ್ನು ವಂಚಿಸುವ ಸಾಧ್ಯತೆ ಇದೆ’ ಎಂದರು.
‘ಕುವೈತ್‌ನಲ್ಲಿ ಉದ್ಯೋಗ ಇದೆ ಎಂದು ನಂಬಿಸುವ ವಂಚಕರ ತಂಡವು ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತದೆ. ಬಳಿಕ ವೀಸಾ ಅನುಮತಿಗೆ, ನೇಮಕಾತಿ ಪತ್ರಕ್ಕೆ ಹಣದ ಬೇಡಿಕೆ ಇಡುತ್ತದೆ. ಮುಂಗಡವಾಗಿ ಹಣ ಪಡೆದು ಬಳಿಕ ಸಂಪರ್ಕದಿಂದ ದೂರವಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.