ADVERTISEMENT

ಶಿರಸಿ | ಗ್ರಾಮಸ್ಥರಿಗೆ ಜಲಶಿಕ್ಷೆ: ಪರಿಹಾರ ಕಾಣದ ಕಾಲುಸಂಕದ ಸಂಕಟ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 13:47 IST
Last Updated 28 ಜೂನ್ 2020, 13:47 IST
ಶಿರಸಿ ತಾಲ್ಲೂಕಿನ ಶೀತಪಾಲ ಹೊಳೆ ಅಡ್ಡಲಾಗಿ ನಿರ್ಮಿಸಿರುವ ಕಾಲುಸಂಕ
ಶಿರಸಿ ತಾಲ್ಲೂಕಿನ ಶೀತಪಾಲ ಹೊಳೆ ಅಡ್ಡಲಾಗಿ ನಿರ್ಮಿಸಿರುವ ಕಾಲುಸಂಕ   

ಶಿರಸಿ: ತಾಲ್ಲೂಕಿನ ಅತ್ಯಂತ ಹಿಂದುಳಿದಿರುವ ಶಿರಸಗಾಂವ ಭಾಗದ ಜನರಿಗೆ ಮಳೆಗಾಲದ ಬಂತೆಂದರೆ ಸಂಕಟ ತಪ್ಪಿದ್ದಲ್ಲ. ನಿತ್ಯವೂ ಕಾಲುಸಂಕದ ಮೇಲೆ ಸರ್ಕಸ್ ಮಾಡಿ, ಜೀವ ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಹೊಳೆಯ ಇನ್ನೊಂದು ದಡ ತಲುಪ‍ಬೇಕು. ಇಲ್ಲವಾದಲ್ಲಿ ಮೂರು ತಿಂಗಳು ಮನೆಯಲ್ಲೇ ಲಾಕ್‌ಡೌನ್ ಆಗಬೇಕು!

ಶಿರಸಗಾಂವದ ಸಮೀಪದ ಶೀತಪಾಲ, ಜೇನುಮೂಲೆ ನಿವಾಸಿಗಳಿಗೆ ಇಂದಿಗೂ ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೀಗಾಗಿ, ಇಲ್ಲಿರುವ ನಾಲ್ಕಾರು ಮನೆಗಳ ಸದಸ್ಯರು ಪ್ರತಿ ಮಳೆಗಾಲದಲ್ಲಿ ಜಲಶಿಕ್ಷೆ ಅನುಭವಿಸುತ್ತಾರೆ. ರಭಸದಲ್ಲಿ ಹರಿಯುವ ಶೀತಪಾಲ ಹೊಳೆಯನ್ನು ದಾಟಿದರೆ ಮಾತ್ರ ಇವರಿಗೆ ಬಾಹ್ಯ ಜಗತ್ತಿನ ಸಂಪರ್ಕ ಸಾಧ್ಯವಾಗುತ್ತದೆ. ಈ ಹೊಳೆ ದಾಟಲು ಸೇತುವೆಯಿಲ್ಲ. ಅದಕ್ಕಾಗಿ ಸ್ಥಳೀಯರೇ ಅಲ್ಲಿ ಮರದ ಕಾಲಸಂಕ ನಿರ್ಮಿಸಿಕೊಂಡು, ಅದನ್ನು ದಾಟಿ ಮುಖ್ಯ ರಸ್ತೆಗೆ ಬಂದು ತಲುಪುತ್ತಾರೆ.

‘ಈ ಭಾಗದಲ್ಲಿ ಕೆಲವೇ ಮನೆಗಳು ಇವೆ. ಆದರೆ, ಈ ಮಾರ್ಗವು ವಾಟೆಬೆಟ್ಟ, ಹೂತನಮನೆ, ಹೆಗ್ಗಾರಳ್ಳಿ ಮೊದಲಾದ ಊರುಗಳಿಗೆ ಸಂಪರ್ಕದ ಕೊಂಡಿಯಾಗಿದೆ. ಇಲ್ಲಿ ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಕ್ಕಳು, ವೃದ್ಧರು ಕಾಲುಸಂಕದ ಮೇಲೆ ಹೆದರುತ್ತಲೇ ಹೆಜ್ಜೆ ಹಾಕುತ್ತಾರೆ. ಸಂಕದ ಕೆಳಗೆ ಉಕ್ಕಿ ಹರಿಯುವ ಹೊಳೆಯನ್ನು ಕಂಡರೆ ಎದೆ ಝಲ್ಲೆನ್ನುತ್ತದೆ’ ಎನ್ನುತ್ತಾರೆ ಸ್ಥಳೀಯ ನಾರಾಯಣ ಹೆಗಡೆ.

ADVERTISEMENT

‘ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯುವುದಾದರೂ, ಇದೇ ಕಾಲುಸಂಕ ದಾಟಬೇಕು. ಮಕ್ಕಳಿಗೆ ಶಾಲೆ ತಲುಪಲು ಪ್ರತಿದಿನ ಸಂಕ ದಾಟುವುದು ಅನಿವಾರ್ಯ. ಬೆಳೆದಿರುವ ಉತ್ಪನ್ನಗಳನ್ನು ತಲೆಮೇಲೆ ಹೊತ್ತುಕೊಂಡು ರೈತರು ಕಾಲುಸಂಕ ದಾಟುತ್ತಾರೆ. ಸ್ವಲ್ಪ ಆಯತಪ್ಪಿದರೂ, ಅಪಾಯವಾಗುವ ಸಾಧ್ಯತೆಯಿರುತ್ತದೆ. ಎರಡು ಕಡೆ ಶಾಶ್ವತ ಕಾಲುಸಂಕ ನಿರ್ಮಿಸಿಕೊಡಿ ಎಂಬ ಬೇಡಿಕೆಗೆ ಜನಪ್ರತಿನಿಧಿಗಳಿಂದ ಸ್ಪಂದನ ದೊರೆತಿಲ್ಲ’ ಎಂದು ಅವರು ಬೇಸರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.