
ಶಿರಸಿ: ಮುಂಗಾರು ಮಳೆಯ ತೇವಾಂಶ ಹೆಚ್ಚಿರುವ ಪರಿಣಾಮ ಒಂದೆಡೆ ಅಡಿಕೆಗೆ ಕೊಳೆ ರೋಗ ಆವರಿಸುತ್ತಿದ್ದರೆ, ಇನ್ನೊಂದೆಡೆ ಮಿಶ್ರಬೆಳೆಯಾದ ಕಾಳುಮೆಣಸಿನ ಬಳ್ಳಿಗಳಿಗೆ ಸೊರಗು ರೋಗ ಆರಂಭವಾಗಿದೆ. ಬಳ್ಳಿಯ ಎಲ್ಲಾ ಭಾಗಗಳಲ್ಲೂ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತೀ ವರ್ಷ ಕಾಡುವ ಈ ರೋಗಕ್ಕೆ ಬೆಳೆಗಾರರು ಕಂಗೆಟ್ಟಿದ್ದಾರೆ.
ಎರಡು ತಿಂಗಳಿನಿಂದ ಮಳೆಯ ಅಬ್ಬರವಿದ್ದು, ತೋಟಗಾರಿಕಾ ಬೆಳೆಗಳಿಗೆ ವಿವಿಧ ರೋಗ ಬಾಧೆ ಆರಂಭವಾಗಿದೆ. ಪ್ರಮುಖವಾಗಿ ಅಡಿಕೆ ಹಾಗೂ ಕಾಳುಮೆಣಸು ಕೃಷಿಕರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಸಂಕಷ್ಟ ಎದುರಾಗಿದೆ. ಈಗಾಗಲೇ ಅಡಿಕೆ ಕಾಯಿಗಳು ಕೊಳೆಗೆ ನೆಲಕ್ಕೆ ಉದುರುತ್ತಿವೆ. ಜತೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ತೋಟಗಳಲ್ಲಿ ಅಡಿಕೆ ಮರಗಳಿಗೆ ಹಬ್ಬಿರುವ ಕಾಳುಮೆಣಸಿನ ಬಳ್ಳಿಗಳು ಸೊರಗು ರೋಗದ ಪರಿಣಾಮ ಕೊಳೆಯಲು ಆರಂಭಿಸಿವೆ. ಈಗಾಗಲೇ ಸಿದ್ದಾಪುರ, ಶಿರಸಿ, ಯಲ್ಲಾಪುರ ಭಾಗದ ಹಲವು ತೋಟಗಳಲ್ಲಿ ರೋಗ ಉಲ್ಬಣಿಸುತ್ತಿದೆ ಎಂಬುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
‘ಈಗಾಗಲೇ ವ್ಯಾಪಕ ಮಳೆಗೆ ಕಾಳುಮೆಣಸು ಬಳ್ಳಿಗಳ ಮೇಲಿನ ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬರುತ್ತಿವೆ. ಸಾಮಾನ್ಯವಾಗಿ ನೆಲದಲ್ಲಿ ಹರಡಿ ಬೆಳೆಯುವ ಕವಲು ಬಳ್ಳಿಗಳು ಮೊದಲು ಈ ರೋಗಕ್ಕೆ ತುತ್ತಾಗುತ್ತಿವೆ. ರೋಗ ನಿಯಂತ್ರಣ ಕ್ರಮ ಅನುಸರಿಸದಿದ್ದರೆ ಈ ಚುಕ್ಕೆಗಳು ದೊಡ್ಡದಾಗುತ್ತ ಎಲೆಗಳನ್ನು ವ್ಯಾಪಿಸಿ ಕೊನೆಗೆ ಬಳ್ಳಿಯ ಎಲ್ಲ ಎಲೆಗಳು ಉದುರುತ್ತವೆ’ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ.
‘ಮಳೆಗಾಲದಲ್ಲಿ ಕಂಡು ಬರುವ ಈ ರೋಗವು ಹಿಂದಿನ ವರ್ಷಗಳ ರೋಗಪೀಡಿತ ಬಳ್ಳಿಯ ಉಳಿಕೆಯಲ್ಲಿ ರೋಗಾಣು ಬದುಕಿ, ಉಳಿದು ವಂಶಾಭಿವೃದ್ಧಿಯನ್ನು ಮುಂದುವರೆಸುತ್ತದೆ. ಮಳೆಯ ತೇವಾಂಶದಲ್ಲಿ ರೋಗಾಣು ಅಲ್ಪ ಸಮಯದಲ್ಲಿ ವೃದ್ಧಿಸಿ ಬೀಜಕಣಗಳನ್ನು ಉತ್ಪತ್ತಿ ಮಾಡುತ್ತದೆ. ಈ ಬೀಜಕಣಗಳು ನೀರಿನ ಮೂಲಕ ಬೇರುಗಳನ್ನು ಸೇರಿ, ಬೇರು ಕೊಳೆಯುದಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ತೋಟಗಾರಿಕಾ ತಜ್ಞರು.
‘ಬೇಸಿಗೆಯಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ಭಾರೀ ಮಳೆಯಾದ ನಂತರ ಬೆಳೆಗಾರರ ಲೆಕ್ಕಾಚಾರಗಳು ತಪ್ಪಾಗಿವೆ. ತೋಟಗಳಲ್ಲಿನ ಕಾಳುಮೆಣಸು ಬಳ್ಳಿಗಳಿಗೆ ಈ ರೋಗ ವೇಗವಾಗಿ ಹರಡುತ್ತಿದೆ. ಮಳೆಯಿಂದಾಗಿ ಬೆಳೆಗಾರರು ಕೀಟನಾಶಕಗಳನ್ನು ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಬೆಳೆಗೆ ಒಮ್ಮೆ ರೋಗ ತಗುಲಿದರೆ, ಶಿಲೀಂದ್ರನಾಶಕ ಕೂಡ ಅದನ್ನು ನಿಯಂತ್ರಿಸಲು, ಹೆಚ್ಚಿನ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ’ ಎಂದು ಶಿರಸಿಯ ಬೆಳೆಗಾರ ಕೇಶವ ಹೆಗಡೆ ಹೇಳುತ್ತಾರೆ.
ಮೆಟಲಾಕ್ಸಿಲ್ 35 ಡಬ್ಲೂ.ಎಸ್ 1 ಗ್ರಾಂ/ ಮೆಟಲಾಕ್ಸಿಲ್ ಎಂ.ಜೆಡ್+ ಮ್ಯಾಂಕೋಜೆಬ್ ಇರುವ ಶಿಲೀಂದ್ರನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿನ ಜತೆ ಅಂಟು ದ್ರಾವಣ 1 ಮಿಲೀ ಪ್ರತಿ ಲೀ. ನೀರಿಗೆ ಬೆರಸಿ ಸಿಂಪರಣೆ ಮಾಡಬೇಕುಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.