ADVERTISEMENT

ಕಾರವಾರ | ಮೀನು ಮಾರುಕಟ್ಟೆಗೂ ‘ವಾಯು’ ಭಾರ!

ಪ್ರಕ್ಷುಬ್ಧ ಸಮುದ್ರದಿಂದಾಗಿ ಶಿಕಾರಿಗಿಳಿಯದ ದೋಣಿಗಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 12:01 IST
Last Updated 12 ಜೂನ್ 2019, 12:01 IST
ಕಾರವಾರದ ಮೀನು ಮಾರುಕಟ್ಟೆಯಲ್ಲಿ ಬುಧವಾರ ಕಡಿಮೆ ಗ್ರಾಹಕರು ಕಂಡುಬಂದರು
ಕಾರವಾರದ ಮೀನು ಮಾರುಕಟ್ಟೆಯಲ್ಲಿ ಬುಧವಾರ ಕಡಿಮೆ ಗ್ರಾಹಕರು ಕಂಡುಬಂದರು   

ಕಾರವಾರ:ಒಂದೆಡೆ ಮುಂಗಾರು ಅವಧಿಯೆಂದು ಯಾಂತ್ರಿಕೃತ ದೋಣಿಗಳಲ್ಲಿ ಮೀನುಗಾರಿಕೆಗೆ ನಿಷೇಧ. ಮತ್ತೊಂದೆಡೆ, ಅರಬ್ಬಿ ಸಮುದ್ರದಲ್ಲಿ ‘ವಾಯು’ ಚಂಡಮಾರುತದ ಪ್ರಭಾವದಿಂದ ಸಾಂಪ್ರದಾಯಿಕ ದೋಣಿಗಳು ಕಡಲಿಗೆ ಇಳಿಯಲು ಸಾಧ್ಯವಾಗದ ಪರಿಸ್ಥಿತಿ. ಇದರಿಂದಾಗಿ ನಗರದ ಮಾರುಕಟ್ಟೆಗೆ ಬುಧವಾರ ಮೀನಿನ ಆವಕ ಗಣನೀಯವಾಗಿ ಕಡಿಮೆಯಾಗಿತ್ತು.

ಇಲ್ಲಿನ ಮೀನು ಮಾರುಕಟ್ಟೆ, ತಾಜಾ ಮೀನುಗಳ ಲಭ್ಯತೆಗೆ ಪ್ರಸಿದ್ಧ. ವಿವಿಧ ರೀತಿಯ, ಪ್ರಭೇದಗಳ ಮೀನುಗಳು ಇಲ್ಲಿ ಸಿಗುತ್ತವೆ. ಹಾಗಾಗಿ ಇಲ್ಲಿನ ಮಾರುಕಟ್ಟೆಸದಾ ಗ್ರಾಹಕರಿಂದ ತುಂಬಿರುತ್ತದೆ. ಆದರೆ, ಎರಡು ದಿನಗಳಿಂದ ರಭಸವಾದ ಗಾಳಿ ಬೀಸುತ್ತಿದೆ. ಅಲ್ಲದೇ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿವೆ. ಸಮುದ್ರ ಭೋರ್ಗರೆಯುವಾಗ ದೋಣಿ ತೆಗೆದುಕೊಂಡು ಶಿಕಾರಿಗೆ ಹೋಗಲು ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ.

‘ಸಮುದ್ರದಲ್ಲಿ ಚಂಡಮಾರುತ ಎದ್ದಿರುವ ಕಾರಣ ಪಾತಿ ದೋಣಿಗಳಲ್ಲಿ ಹೋಗಿ ಮೀನುಗಾರಿಕೆ ಮಾಡಲಾಗುತ್ತಿಲ್ಲ. ರಭಸದ ಗಾಳಿಯ ನಡುವೆ ಸಮುದ್ರದಲ್ಲಿ ಸಾಗುವುದು ಅತ್ಯಂತ ಅಪಾಯಕಾರಿ. ಚಂಡಮಾರುತದ ಪ್ರಭಾವ ಕಡಿಮೆಯಾದ ಬಳಿಕ ಮೀನುಗಾರರು ಮತ್ತೆ ಕೆಲಸ ಶುರು ಮಾಡುತ್ತಾರೆ. ನಂತರ ಎಂದಿನಂತೆ ಮಾರುಕಟ್ಟೆಗೆಮೀನು ಆವಕವಾಗಲಿದೆ’ ಎಂದು ಮೀನುಗಾರರ ಮುಖಂಡ ವಿನಾಯಕ ಹರಿಕಂತ್ರ ಹೇಳಿದರು.

ADVERTISEMENT

‘ಮುಂಗಾರಿನ ಅವಧಿಯಲ್ಲಿ ಆಳಸಮುದ್ರಕ್ಕೆ ಹೋದರೆ ಮಾತ್ರ ಮೀನುಗಳು ಸಿಗುತ್ತವೆ. ಅಷ್ಟು ದೂರ ಸಣ್ಣ ದೋಣಿಗಳಲ್ಲಿ ಹೋಗಲು ಸಾಧ್ಯವಿಲ್ಲ. ಈ ರೀತಿಯ ಚಂಡಮಾರುತ ಬೀಸಿದರೆ ಮೀನುಗಾರಿಕೆಗೆ ಅನುಕೂಲವಲ್ಲ. ಇದರಿಂದ ಮೀನುಗಳು ಬಲೆಗೆ ಬೀಳುವುದಿಲ್ಲ ಎನ್ನುವುದು ಅನುಭವಿಗಳ ಮಾತು’ ಎಂದು ಅವರು ವಿವರಿಸಿದರು.

‘ಪ್ರತಿವರ್ಷ ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಆಗುತ್ತಿರಲಿಲ್ಲ. ನಗರದ ಜನರಿಗೆಬೇಕಾದಷ್ಟು ಲಭ್ಯತೆ ಇರುತ್ತಿತ್ತು. ಈ ಬಾರಿ ಮೀನಿನ ಕೊರತೆಯೂ ಆಗಿ, ಗ್ರಾಹಕರೂ ಮಾರುಕಟ್ಟೆಯತ್ತ ಬರುತ್ತಿಲ್ಲ. ಇದರಿಂದ ಸ್ವಲ್ಪ ನಷ್ಟವಾಗಿದೆ’ ಎನ್ನುತ್ತಾರೆ ಮೀನು ಮಾರಾಟ ಮಾಡುವ ಮಹಿಳೆಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.