ADVERTISEMENT

ಕುಮಟಾ: ಬಿಡಾಡಿ ದನ ಕಳ್ಳತನದ ಜಾಲ?

ಕಾಣೆಯಾಗುತ್ತಿದೆ ಎ.ವಿ.ಬಾಳಿಗಾ ಕಾಲೇಜು ಆವರಣದಲ್ಲಿ ಮಲಗಿದ್ದ ದನಗಳು

ಎಂ.ಜಿ ನಾಯ್ಕ
Published 9 ಜನವರಿ 2024, 5:11 IST
Last Updated 9 ಜನವರಿ 2024, 5:11 IST
ಕುಮಟಾದ ಡಾ.ಬಾಳಿಗಾ ಕಾಲೇಜು ಮೈದಾನದಿಂದ ಬೀಡಾಡಿ ದನಗಳು ಓಡಾಡುವ ದಾರಿ
ಕುಮಟಾದ ಡಾ.ಬಾಳಿಗಾ ಕಾಲೇಜು ಮೈದಾನದಿಂದ ಬೀಡಾಡಿ ದನಗಳು ಓಡಾಡುವ ದಾರಿ   

ಕುಮಟಾ: ಪಟ್ಟಣದ ಡಾ.ಎ.ವಿ. ಬಾಳಿಗಾ ಕಾಲೇಜು ಮೈದಾನದಲ್ಲಿ ರಾತ್ರಿ ವೇಳೆ ಮಲಗುವ ಬಿಡಾಡಿ ದನಗಳನ್ನು ಕದ್ದು ಸಾಗಿಸುವ ಜಾಲ ಸಕ್ರೀಯವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪ ವ್ಯಕ್ತವಾಗಿದೆ.

ಕಾಲೇಜು ರಸ್ತೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಬಿಡಾಡಿ ದನಗಳ ಸಂಖ್ಯೆ ಈಚೆಗೆ ಇಳಿಕೆಯಾಗುತ್ತಿರುವುದು ಜನರಲ್ಲಿ ಶಂಕೆ ಮೂಡಿಸಿದೆ. ತಡರಾತ್ರಿ ಅಪರಿಚಿತರು ಜಾನುವಾರುಗಳನ್ನು ಕದ್ದು ಸಾಗಿಸುತ್ತಿರುವುದಾಗಿ ಸ್ಥಳೀಯ ಕೆಲವರು ಆರೋಪಿಸಿದ್ದಾರೆ.

‘ತಡರಾತ್ರಿ ಕಳೆದು ನಸುಕಿನ ಜಾವ ಮೂಡುವ ಸಮಯದೊಳಗೆ ಆಟೊ ರಿಕ್ಷಾವೊಂದು ಕಾಲೇಜು ಮೈದಾನದ ಪಕ್ಕದಿಂದ ದನವೊಂದನ್ನು ಹೇರಿಕೊಂಡು ಸಾಗಿದ್ದನ್ನು ಗಮನಿಸಿದ್ದೇನೆ. ಈ ವಾಹನಕ್ಕೆ ಬೆಂಗಾವಲಾಗಿ ದ್ವಿಚಕ್ರ ವಾಹನವೊಂದು ತೆರಳುತ್ತಿತ್ತು’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ADVERTISEMENT

‘ಕಾಲೇಜು ಮೈದಾನದಲ್ಲಿ ಮಲಗಿದ್ದ ಜಾನುವಾರಗಳನ್ನು ಎಬ್ಬಿಸಿ ಮೈದಾನದ ಪಕ್ಕದ ಕಾಲುದಾರಿಗೆ ನಿಲ್ಲಿಸುವ ಕೆಲಸವನ್ನು ಇಬ್ಬರು ಅಪರಿಚಿತರು ಮಾಡುತ್ತಾರೆ. ಬಳಿಕ ಅವುಗಳನ್ನು ದೊಡ್ಡ ವಾಹನವೊಂದಕ್ಕೆ ಬಲವಂತವಾಗಿ ತುಂಬಿಸಿಕೊಂಡು ಸಾಗಿದ್ದನ್ನು ನೋಡಿದ್ದೇವೆ. ಆದರೆ ಅವುಗಳನ್ನು ಯಾವ ಕಾರಣಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದು ಗೊತ್ತಾಗದೆ ಸುಮ್ಮನಿದ್ದಿದ್ದೆವು. ಈಚೆಗೆ ಪಟ್ಟಣದಲ್ಲಿ ಬಿಡಾಡಿ ದನಗಳನ್ನು ಕದಿಯುವ ಜಾಲ ಸಕ್ರೀಯವಾಗಿದೆ ಎಂಬ ದೂರುಗಳನ್ನು ಗಮನಿಸಿದಾಗ ಇಲ್ಲಿಯೂ ಜಾನುವಾರ ಕಳ್ಳತನ ನಡೆದಿದ್ದು ಅರಿವಿಗೆ ಬಂದಿದೆ’ ಎಂದು ಸ್ಥಳೀಯ ಮಹಿಳೆಯೊಬ್ಬರು ದೂರಿದರು.

‘ಕಾಲೇಜು ರಸ್ತೆಯ ಆಸುಪಾಸಿನಲ್ಲಿ ಸುತ್ತಾಡುತ್ತಿದ್ದ ಬಿಡಾಡಿ ಜಾನುವಾರಗಳಿಗೆ ನಿತ್ಯ ಆಹಾರ ನೀಡುತ್ತಿದ್ದೆವು. ಬಹುತೇಕ ಜಾನುವಾರುಗಳು ಮನೆಯ ಅಂಗಳಕ್ಕೆ ಬಂದು ಆಹಾರ ಸ್ವೀಕರಿಸುತ್ತಿದ್ದವು. ತೀರಾ ಈಚೆಗೆ ಅವುಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ವಿವೇಕನಗರ ನಿವಾಸಿ ಗೌತಮ ಭಟ್ ಹೇಳಿದರು.

ಜಾನುವಾರು ಕಳ್ಳತನದ ಕುರಿತು ಇಲಾಖೆಗೆ ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗಿಲ್ಲ. ಆದರೂ ಬೀಟ್ ಹೆಚ್ಚಿಸಿ ನಿಗಾ ಇಡಲಾಗುವುದು
ತಿಮ್ಮಪ್ಪ ನಾಯ್ಕ ಎಸ್ಐ ಕುಮಟಾ ಪೊಲೀಸ್ ಠಾಣೆ ಎಸ್ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.