ADVERTISEMENT

ಉಪ ಆದಾಯ ಕಸಿದ ಉಪ್ಪಾಗೆ

ಇಳುವರಿ ಕುಂಠಿತ, ಬೆಲೆಯೂ ಕಡಿಮೆ; ಕೊಯ್ಲಿಗೆ ಸಂಗ್ರಾಹಕರ ನಿರಾಸಕ್ತಿ

ಸಂಧ್ಯಾ ಹೆಗಡೆ
Published 26 ಜೂನ್ 2019, 15:50 IST
Last Updated 26 ಜೂನ್ 2019, 15:50 IST
ಕೊಯ್ಲು ಮಾಡಿರುವ ಉಪ್ಪಾಗೆ
ಕೊಯ್ಲು ಮಾಡಿರುವ ಉಪ್ಪಾಗೆ   

ಶಿರಸಿ: ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಮಲೆನಾಡಿನ ಜನರಿಗೆ ಆದಾಯದ ಮೂಲವಾಗಿರುವ ಕಿರು ಅರಣ್ಯ ಉತ್ಪನ್ನ ಉಪ್ಪಾಗೆ ಈ ಬಾರಿ ಹೆಚ್ಚು ಹುಳಿಯಾಗಿದೆ. ಒಂದೆಡೆ ಬೆಳೆ ಕುಂಠಿತವಾಗಿದ್ದರೆ, ಇನ್ನೊಂದೆಡೆ ಬೆಲೆಯೂ ಕುಸಿತ ಕಂಡಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಜೂನ್ ತಿಂಗಳ ವೇಳೆಗೆ ಉಪ್ಪಾಗೆ ಹಣ್ಣಿನ ಸಂಗ್ರಹ ಆರಂಭವಾಗುತ್ತದೆ. ಶೇ 30ರಷ್ಟು ಹಳ್ಳಿಗರು ಕಾಡಿನ ಈ ಉಪ ಆದಾಯದಿಂದ ಬದುಕು ಕಟ್ಟಿಕೊಂಡಿದ್ದಾರೆ. ಅವುಗಳಲ್ಲಿ ಉಪ್ಪಾಗೆ (garcenia gummigutta) ಕೂಡ ಒಂದು. ಅರಣ್ಯ ಪ್ರದೇಶದಲ್ಲಿರುವ ಈ ಮರಗಳ ಒಡೆತನ ಅರಣ್ಯ ಇಲಾಖೆಯದ್ದು. ಗ್ರಾಮ ಅರಣ್ಯ ಸಮಿತಿ ಅಸ್ತಿತ್ವದಲ್ಲಿ ಇರುವಲ್ಲಿ ಸಮಿತಿ ಅಡಿಯಲ್ಲಿ ಹಾಗೂ ಇನ್ನುಳಿದ ಪ್ರದೇಶಗಳಲ್ಲಿ ಟೆಂಡರ್ ಕರೆದು ಉಪ್ಪಾಗೆ ಹಣ್ಣನ್ನು ಸಂಗ್ರಹಿಸಲಾಗುತ್ತದೆ. ಕೃಷಿ ಬೆಳೆಗಳು ಕೈಕೊಟ್ಟ ಸಂದರ್ಭದಲ್ಲಿ ಸಣ್ಣ ರೈತರಿಗೆ ನೆರವಿಗೆ ಬಂದಿದ್ದ ನೈಸರ್ಗಿಕವಾಗಿ ಬೆಳೆಯುವ ಈ ಕಾಡಿನ ಉತ್ಪನ್ನ.

ಆದರೆ, ಈ ವರ್ಷ ಇದರ ಬೆಲೆ ತೀರಾ ಕಡಿಮೆಯಿದೆ. ಕಳೆದ ವರ್ಷ ಕೆ.ಜಿ.ಯೊಂದಕ್ಕೆ ಗರಿಷ್ಠ ₹ 120 ದರ ಸಿಕ್ಕಿದ್ದರೆ, ಈ ಬಾರಿ ₹ 50ರಿಂದ 60 ದರ ನಡೆಯುತ್ತಿದೆ. ಶಿರಸಿ ಅರಣ್ಯ ವಿಭಾಗದ ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ, ಶಿರಸಿ ತಾಲ್ಲೂಕಿನ ಜಾನ್ಮನೆ, ಸಂಪಖಂಡ ಹಾಗೂ ಹುಲೇಕಲ್ ಅರಣ್ಯ ವಲಯದಲ್ಲಿ ಉಪ್ಪಾಗೆ ಬೆಳೆ ಹೆಚ್ಚು. ಸಕ್ರಿಯವಾಗಿರುವ ವಿಎಫ್‌ಸಿಗಳು ಉಪ್ಪಾಗೆ ಸಿಪ್ಪೆ ಒಣಗಿಸಲು ಡ್ರೈಯರ್ ಅಳವಡಿಸಿಕೊಂಡಿವೆ. ಇದರಿಂದ ಕಾಡಿನ ಮೇಲಿನ ಒತ್ತಡವೂ ಕಡಿಮೆಯಾಗಿದೆ.

ADVERTISEMENT

ಸಿದ್ದಾಪುರ ತಾಲ್ಲೂಕಿನಲ್ಲಿ ಈ ಬಾರಿ ಬೆಳೆ ಕಡಿಮೆಯಿದೆ. ಆದರೆ, ಶಿರಸಿ ತಾಲ್ಲೂಕಿನ ಜಾನ್ಮನೆ ವಲಯದಲ್ಲಿ ಉತ್ತಮ ಬೆಳೆಯಿದೆ ಎಂಬುದು ಸಂಗ್ರಾಹಕರ ಅನುಭವ. ‘ಉಪ್ಪಾಗೆ ಬೆಳೆ ಮಿತಿಯಲ್ಲಿದ್ದರೇ ಒಳ್ಳೆಯದು. ಇದರಿಂದ ಕಾಡು ಉಳಿಯುತ್ತದೆ. ಡ್ರೈಯರ್ ಕೆಲವೇ ಕಡೆಗಳಲ್ಲಿ ಮಾತ್ರವಿದೆ. ಒಂದು ಕ್ವಿಂಟಲ್ ಉಪ್ಪಾಗೆ ಸಿಪ್ಪೆ ಒಣಗಿಸಲು 12 ಕ್ವಿಂಟಲ್‌ನಷ್ಟು ಕಟ್ಟಿಗೆ ಬೇಕು. ಉಪ್ಪಾಗೆಗೆ ದರವಿದ್ದರೆ, ಕಟ್ಟಿಗೆ ಸಂಗ್ರಹವೂ ಹೆಚ್ಚಾಗುತ್ತದೆ’ ಎಂದು ಪರಿಸರ ಕಾಳಜಿಯ ಹಳ್ಳಿಗರೊಬ್ಬರು ಹೇಳಿದರು.

‘ದರ ಹೆಚ್ಚಿದ್ದರೆ ಸಂಗ್ರಾಹಕರು ಆಸಕ್ತಿವಹಿಸಿ ಕೊಯ್ಲು ಮಾಡುತ್ತಾರೆ. ದರ ಕಡಿಮೆಯಿದ್ದರೆ, ಸಂಸ್ಕರಣೆ ವೆಚ್ಚವೇ ಅಧಿಕವಾಗುತ್ತದೆ. ಈ ವರ್ಷ ಅನೇಕರು ಉಪ್ಪಾಗೆ ಸಂಗ್ರಹಕ್ಕೆ ಹೋಗುತ್ತಿಲ್ಲ’ ಎನ್ನುತ್ತಾರೆ ಸಂಗ್ರಾಹಕ ಸುಬ್ರಾಯ ನಾಯ್ಕ. ‘ನಮ್ಮ ಭಾಗದಲ್ಲಿ ಕಳೆದ ವರ್ಷ ಶೇ 10ರಷ್ಟು ಬೆಳೆಯಿತ್ತು. ಈ ವರ್ಷ ಉತ್ತಮ ಬೆಳೆಯಿದೆ. ನಮ್ಮಲ್ಲಿ ಡ್ರೈಯರ್‌ನಲ್ಲಿ ಉಪ್ಪಾಗೆ ಒಣಗಿಸುತ್ತೇವೆ’ ಎನ್ನುತ್ತಾರೆ ಖೂರ್ಸೆ ವಿಎಫ್‌ಸಿ ಅಧ್ಯಕ್ಷ ಸತೀಶ ಭಟ್ಟ.

‘ಶಿರಸಿ ವಿಭಾಗದಲ್ಲಿ 2017–18, 2018–19ನೇ ಸಾಲಿನಲ್ಲಿ ಕರೆದಿದ್ದ ಎರಡು ವರ್ಷಗಳ ಟೆಂಡರ್‌ನಲ್ಲಿ ₹ 39 ಲಕ್ಷ ಆದಾಯ ದೊರೆತಿದೆ. ಈ ಬಾರಿ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೂ, ಇಲಾಖೆಯ ಆದಾಯಗೆ ₹ 70ಲಕ್ಷದಷ್ಟು ಆದಾಯ ನಿರೀಕ್ಷಿಸಲಾಗಿದೆ. ಟೆಂಡರ್‌ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಯುನಿಟ್ ಬದಲಾಗಿ, ಉತ್ಪನ್ನದ ತೂಕ ಆಧರಿಸಿ, ದರ ನೀಡಲಾಗುತ್ತದೆ. ಇದರಿಂದ ಹೆಚ್ಚು ಆದಾಯ ಬರುತ್ತದೆ. ವಿಭಾಗದಲ್ಲಿ 100 ಟನ್ ಉಪ್ಪಾಗೆ ಸಿಗಬಹುದೆಂದು ಅಂದಾಜಿಸಲಾಗಿದೆ’ ಎಂದು ಡಿಎಫ್‌ಒ ಎಸ್.ಜಿ.ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***
ಉಪ್ಪಾಗೆ ಸಿಪ್ಪೆಯ ರಸ ತೆಗೆಯುವ ಯಂತ್ರ ಬಂದರೆ, ಸಿಪ್ಪೆ ಒಣಗಿಸುವುದು ಸುಲಭವಾಗುತ್ತದೆ. ಕಟ್ಟಿಗೆಯೂ ಕಡಿಮೆ ಸಾಕು. ಈ ತಂತ್ರಜ್ಞಾನ ಪರಿಚಯಿಸಿದರೆ, ಹೆಚ್ಚು ಅನುಕೂಲ
–ಸತೀಶ ಭಟ್ಟ, ಖೂರ್ಸೆ ವಿಎಫ್‌ಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.