ADVERTISEMENT

ಬಸ್ ತಂಗುದಾಣ ಶುಚಿಗೊಳಿಸುವ ‘ಕಾಯಕಯೋಗಿ’

ಸತತ ಹನ್ನೆರಡು ವರ್ಷದಿಂದ ಶ್ರಮದಾನ ನಡೆಸುತ್ತಿರುವ ಗಣಪತಿ ಯಲ್ಲಾಪುರ

ಗಣಪತಿ ಹೆಗಡೆ
Published 23 ಜುಲೈ 2022, 19:30 IST
Last Updated 23 ಜುಲೈ 2022, 19:30 IST
ಶಿರಸಿಯ ಮಿನಿ ವಿಧಾನಸೌಧದ ಎದುರಿನಲ್ಲಿರುವ ಬಸ್ ತಂಗುದಾಣ ಶುಚಿಗೊಳಿಸುತ್ತಿರುವ ಗಣಪತಿ ರಾಮಾ ಯಲ್ಲಾಪುರ.
ಶಿರಸಿಯ ಮಿನಿ ವಿಧಾನಸೌಧದ ಎದುರಿನಲ್ಲಿರುವ ಬಸ್ ತಂಗುದಾಣ ಶುಚಿಗೊಳಿಸುತ್ತಿರುವ ಗಣಪತಿ ರಾಮಾ ಯಲ್ಲಾಪುರ.   

ಶಿರಸಿ: ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ‘ಸ್ವಚ್ಛ ಭಾರತ’ ಘೋಷಣೆ ಮಾಡಿದ ಬಳಿಕ ಹಲವರು ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ನಡೆಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಆದರೆ, ಅದಕ್ಕೂ ನಾಲ್ಕು ವರ್ಷ ಮುಂಚಿನಿಂದ ಇಲ್ಲಿನ ವ್ಯಕ್ತಿಯೊಬ್ಬರು ನಿತ್ಯವೂ ಬಸ್ ತಂಗುದಾಣ ಶುಚಿಗೊಳಿಸುವ ಕೆಲಸ ಮಾಡುತ್ತ ಬಂದಿದ್ದಾರೆ.

ಇಲ್ಲಿನ ಗಣೇಶ ನಗರದ ನಿವಾಸಿ, ನಿವೃತ್ತ ಸರ್ಕಾರಿ ನೌಕರ ಗಣಪತಿ ರಾಮಾ ಯಲ್ಲಾಪುರ ಸತತ 12 ವರ್ಷಗಳಿಂದ ಸ್ವಚ್ಛತಾ ಶ್ರಮದಾನ ನಡೆಸುತ್ತ ಬಂದಿರುವ ಕಾಯಕಯೋಗಿ.

ಒಂದು ಕಾಲದಲ್ಲಿ ಕಸ ಕಡ್ಡಿಗಳಿಂದಲೇ ತುಂಬಿ, ಜನರು ಒಳಹೊಕ್ಕಲೂ ಅಸಹ್ಯಪಡುತ್ತಿದ್ದ ಮಿನಿ ವಿಧಾನಸೌಧದ ಎದುರಿನಲ್ಲಿರುವ ತಂಗುದಾಣ ಇವರ ಶ್ರಮದಿಂದ ಶುಚಿತ್ವ ಕಾಯ್ದುಕೊಂಡಿದೆ. ನಿತ್ಯ ಸ್ವಚ್ಚತೆಯಿಂದ ಕೂಡಿರುವ ತಂಗುದಾಣ ಹತ್ತಾರು ಪ್ರಯಾಣಿಕರಿಗೆ ಆಸರೆ ನೀಡುತ್ತಿದೆ.

ADVERTISEMENT

ನಿತ್ಯ ನಸುಕಿನ ವೇಳೆ ಗಣಪತಿ ತಂಗುದಾಣದ ಕಸ ಗುಡಿಸುತ್ತಾರೆ. ಕಸಕಡ್ಡಿಗಳು ವಿಪರೀತವಿದ್ದಾಗ ಗುಡಿಸಿ, ಪಿನಾಯಿಲ್ ಬಳಸಿ ತಂಗುದಾಣದ ನೆಲಹಾಸು ತೊಳೆಯುತ್ತಾರೆ. ವಾರಕ್ಕೆ ಕನಿಷ್ಠ ಎರಡು ದಿನ ಹೀಗೆ ಪೂರ್ತಿಯಾಗಿ ಶುಚಿಗೊಳಿಸುತ್ತಾರೆ.

ಅಂದ ಹಾಗೆ ಗಣಪತಿ ಅವರಿಗೆ ಈಗ 63ರ ಇಳಿ ವಯಸ್ಸು. ಆದರೂ ಸ್ವಚ್ಛತಾ ಕಾರ್ಯದಲ್ಲಿ ಉತ್ಸಾಹ ಕಳೆದುಕೊಂಡಿಲ್ಲ. ಅವರು ಹುಲೇಕಲ್‍ನ ಶ್ರೀದೇವಿ ಪದವಿಪೂರ್ವ ಕಾಲೇಜಿನಲ್ಲಿ ಜವಾನರಾಗಿ ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ್ದರು. ಸದ್ಯ ಶಿರಸಿಯ ನ್ಯಾಯಾಲಯದ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಹನ್ನೆರಡು ವರ್ಷದ ಹಿಂದೆ ಕೆಲಸದ ಅಂಗವಾಗಿ ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿದ್ದಾಗ ತಂಗುದಾಣದ ಸ್ಥಿತಿ ಗಮನಿಸಿದ್ದೆ. ಕಸಗಳಿಂದ ತುಂಬಿದ್ದ ತಂಗುದಾಣಕ್ಕೆ ಕಾಲಿಡಲು ಜನ ಹಿಂದೇಟು ಹಾಕುತ್ತಿದ್ದರು. ವಿದ್ಯಾರ್ಥಿಗಳು ಬಿಸಿಲಿನಲ್ಲೇ ಗಂಟೆಗಟ್ಟಲೆ ಬಸ್‍ಗಾಗಿ ಕಾಯುವುದು ನೋಡಿ ಬೇಸರವಾಗಿತ್ತು. ಆಗ ತಂಗುದಾಣ ಶುಚಿಗೊಳಿಸಲು ನಿರ್ಧರಿಸಿದ್ದೆ’ ಎಂದು ಶುಚಿತ್ವ ಕಾಯಕದ ಹಿನ್ನೆಲೆ ವಿವರಿಸುತ್ತಾರೆ ಗಣಪತಿ ಯಲ್ಲಾಪುರ.

‘ತಂಗುದಾಣ ಸ್ವಚ್ಛತೆ ಈಗ ದೈನಂದಿನ ಕೆಲಸದ ಭಾಗವಾಗಿ ಪರಿಗಣಿಸಿದ್ದೇನೆ. ತ್ಯಾಜ್ಯಗಳ ಪ್ರಮಾಣ ಹೆಚ್ಚಿದ್ದರೆ ನಗರಸಭೆ ಸಿಬ್ಬಂದಿಗೆ ತಿಳಿಸುತ್ತೇನೆ. ಅವರು ಸಹಕಾರ ನೀಡುತ್ತಾರೆ. ಭಾನುವಾರ ವಿದ್ಯಾ ನಗರ ರುದ್ರಭೂಮಿ ಸ್ವಚ್ಛತೆಯಲ್ಲೂ ತೊಡಗಿಕೊಳ್ಳುತ್ತೇನೆ’ ಎಂದು ಹೇಳಿದರು.

ಹಳ್ಳಿ ತಂಗುದಾಣವೂ ಶುಚಿ:

ಪ್ರತಿ ವರ್ಷ ಗಾಂಧಿ ಜಯಂತಿ ದಿನ ತಾಲ್ಲೂಕಿನ ಕಲಗಾರ ಮತ್ತು ದೇವರಕೊಪ್ಪ ಗ್ರಾಮದ ಬಸ್ ತಂಗುದಾಣವನ್ನು ಗಣಪತಿ ಯಲ್ಲಾಪುರ ಖುದ್ದಾಗಿ ಶುಚಿಗೊಳಿಸುತ್ತಾರೆ. ಮಳೆಗಾಲದ ವೇಳೆ ತಂಗುದಾನದ ಸುತ್ತ ಆಳೆತ್ತರಕ್ಕೆ ಬೆಳೆದು ನಿಂತ ಗಿಡಗಂಟಿಗಳನ್ನು ತೆರವುಗೊಳಿಸಿ, ತಂಗುದಾಣವನ್ನು ಸ್ವಚ್ಛಗೊಳಿಸುತ್ತಾರೆ.

‘ಸ್ವಚ್ಛತೆಯೇ ಆರೋಗ್ಯ ಕಾಯುವ ಮೊದಲ ಔಷಧ. ಅದನ್ನು ಜನರಿಗೆ ಇಂತಹ ಕಾರ್ಯದ ಮೂಲಕ ತಿಳಿಸುವ ಸಣ್ಣ ಪ್ರಯತ್ನ ಇದು’ ಎನ್ನುತ್ತಾರೆ ಗಣಪತಿ.

ಆರಂಭಿಕ ದಿನದಲ್ಲಿ ನಿತ್ಯ ತಂಗುದಾಣದಲ್ಲಿ ಕಸದ ರಾಶಿ ವಿಪರೀತವಿರುತ್ತಿತ್ತು. ಈಗ ಜನರಿಗೂ ಕಸ ಎಸೆಯಬಾರದೆಂಬ ಪ್ರಜ್ಞೆ ಮೂಡಿದೆ. ಈ ಪ್ರಜ್ಞೆ ಯುವ ಸಮೂಹಕ್ಕೆ ಪರಿಣಾಮಕಾರಿ ವಿಸ್ತರಿಸಬೇಕು ಎಂಬುದು ಇಚ್ಛೆ.

-ಗಣಪತಿ ರಾಮಾ ಯಲ್ಲಾಪುರ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.