ಭಟ್ಕಳ: ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ಸಂಭ್ರಮದಿಂದ ನಡೆದ ತಾಲೂಕಿನ ಪ್ರಸಿದ್ಧ ಮಾರಿ ಹಬ್ಬ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಗುರುವಾರ ಸಂಜೆ ಮಾರಿದೇವಿ ಮೂರ್ತಿ ವಿಸರ್ಜಿಸುವ ಮೂಲಕ ಸಂಪನ್ನಗೊಂಡಿತು.
ಧಾರಾಕಾರ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ದೇವಿಯ ಮೂರ್ತಿಯನ್ನು ಪಟ್ಟಣದ ಮಾರಿಗುಡಿಯಿಂದ ಸಾವಿರಾರು ಭಕ್ತರು, ಸ್ವಯಂ ಸೇವಕರು, ಆಡಳಿತ ಮಂಡಳಿ ಸದಸ್ಯರು ಸೇರಿ ಜಾಲಿಕೋಡಿಯ ಸಮುದ್ರ ತೀರಕ್ಕೆ ಒಯ್ದು ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಿದರು.
ಸಂಜೆ 5 ಗಂಟೆ ಸುಮಾರಿಗೆ ಸ್ವಯಂ ಸೇವಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮಾರಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಜಾಲಿಕೋಡಿ ಸಮುದ್ರ ತೀರಕ್ಕೆ ಕೊಂಡೊಯ್ದು ವಿಧಿವಿಧಾನಗಳ ಮೂಲಕ ವಿಸರ್ಜಿಸುವುದರೊಂದಿಗೆ ಮಾರಿ ಜಾತ್ರೆ ಸಂಪನ್ನಗೊಂಡಿತ್ತು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನಾರಾಯಣ ಖಾರ್ವಿ ಮಾದೇವ ಮೊಗೇರ, ರಘುವೀರ ಬಾಳಗಿ, ದಿನೇಶ ನಾಯ್ಕ, ಕೃಷ್ಣ ನಾಯ್ಕ, ನಾರಾಯಣ ಖಾರ್ವಿ, ಗೋವಿಂದ ನಾಯ್ಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್ಪಿ ಕೆ. ಮಹೇಶ ಅವರು ಮೆರವಣಿಗೆಯ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಅಹಿತರ ಘಟನೆ ನಡೆಯದಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.