ADVERTISEMENT

ಫೆ.24ರಿಂದ ಮಾರಿಕಾಂಬಾ ದೇವಿ ಜಾತ್ರೆ: ಮಾರಿ ಚಪ್ಪರಕ್ಕೆ ಸಿದ್ಧತೆ

ರಾಜೇಂದ್ರ ಹೆಗಡೆ
Published 29 ಜನವರಿ 2026, 7:28 IST
Last Updated 29 ಜನವರಿ 2026, 7:28 IST
ಶಿರಸಿಯ ಬಿಡ್ಕಿಬಯಲಿನಲ್ಲಿ ಜಾತ್ರೆ ಅಂಗವಾಗಿ ಅಂಗಡಿಕಾರರು ಅಂಗಡಿಗಳನ್ನು  ತೆರವುಗೊಳಿಸುತ್ತಿರುವುದು
ಶಿರಸಿಯ ಬಿಡ್ಕಿಬಯಲಿನಲ್ಲಿ ಜಾತ್ರೆ ಅಂಗವಾಗಿ ಅಂಗಡಿಕಾರರು ಅಂಗಡಿಗಳನ್ನು  ತೆರವುಗೊಳಿಸುತ್ತಿರುವುದು   

ಶಿರಸಿ: ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ನಗರದಲ್ಲಿ ಸಿದ್ಧತೆಗಳು ಬಿರುಸುಗೊಂಡಿವೆ. ಒಂದೆಡೆ ದೇವಾಲಯದ ಆವರಣದಲ್ಲಿ ಪಾರಂಪರಿಕ ಕಾವಿ ಕಲೆಯ ಸೌಂದರ್ಯ ಅನಾವರಣಗೊಳ್ಳುತ್ತಿದ್ದರೆ, ಇನ್ನೊಂದೆಡೆ ದೇವಿ ವಿರಾಜಮಾನವಾಗುವ ಮಾರಿ ಚಪ್ಪರವನ್ನು ಸಜ್ಜುಗೊಳಿಸುವ ಸಲುವಾಗಿ ಸುತ್ತಮುತ್ತಲ ಅಂಗಡಿಗಳ ತೆರವು ಕಾರ್ಯ ಭರದಿಂದ ಸಾಗಿದೆ.

ಫೆ.24ರಿಂದ ಆರಂಭಗೊಳ್ಳಲಿರುವ ಜಾತ್ರಾ ಮಹೋತ್ಸವದ ವಿಧಿವಿಧಾನಗಳು ನಡೆಯುವ ಬಿಡ್ಕಿಬಯಲು ಹಾಗೂ ಕೋಣನಬಿಡ್ಕಿಯ ಒಂದು ಮುಕ್ಕಾಲು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಅಂಗಡಿಗಳಿವೆ. ದೇವಿ ಆಸೀನವಾಗುವ ಮಾರಿ ಚಪ್ಪರದ ಗದ್ದುಗೆ ಹಾಗೂ ಭಕ್ತಾದಿಗಳ ಓಡಾಟಕ್ಕೆ ವಿಶಾಲವಾದ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸುವ ಕಾರ್ಯ ನಡೆದಿದೆ. ಇದೇ ವೇಳೆ ಮಾರಿ ಚಪ್ಪರವೂ ನಿಧಾನವಾಗಿ ತಲೆ ಎತ್ತುತ್ತಿದೆ. 

‘ಇಲ್ಲಿಯ ಕೋಣನಬಿಡ್ಕಿ, ಬಿಡ್ಕಿಬಯಲು ಸೇರಿದಂತೆ ಕೆಲ ಪ್ರದೇಶಗಳು ನಗರಸಭೆ ವ್ಯಾಪ್ತಿಗೆ ಸೇರಿವೆ. ಇಲ್ಲಿ ಅಂಗಡಿ ಮುಗ್ಗಟ್ಟು ನಿರ್ಮಿಸಿಕೊಳ್ಳಲು ನಗರಸಭೆಯೇ ಅನುಮತಿ ನೀಡುತ್ತದೆಯಾದರೂ ಈ ಅನುಮತಿ 23 ತಿಂಗಳುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ನಗರಸಭೆಯ ಷರತ್ತುಗಳಿಗೆ ಅನುಗುಣವಾಗಿ ಕೋಣನಬಿಡ್ಕಿ ಮತ್ತು ಬಿಡ್ಕಿಬಯಲಿನಲ್ಲಿ ಅಂಗಡಿಕಾರರಿಗೆ ಶಾಶ್ವತ ಕಟ್ಟಡ ನಿರ್ಮಿಸಿಕೊಳ್ಳಲು ಅನುಮತಿ ನೀಡುವುದಿಲ್ಲ. ಅಲ್ಲದೇ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಿಕೊಳ್ಳಲು ಇಲ್ಲಿಯ ಅಂಗಡಿಕಾರರಿಗೆ ತಗಡಿನ ಶೀಟ್‌ಗಳನ್ನು, ಮರದ ಹಲಿಗೆಗಳನ್ನೂ ಸಹ ಈ ಹಿಂದೆ ನಗರಸಭೆ ನೀಡಿದೆ. ಜಾತ್ರಾ ದಿನಾಂಕ ಸಮೀಪಿಸಿದಂತೆ ನಗರಸಭೆ ಅಂಗಡಿಗಳನ್ನು ತೆರವುಗೊಳಿಸಲು ಸೂಚಿಸಿದ ತಕ್ಷಣ ಅಂಗಡಿಕಾರರೂ ಸಹ ಪ್ರತಿರೋಧ ವ್ಯಕ್ತಪಡಿಸದೇ ತೆರವುಗೊಳಿಸಿ ಸಹಕರಿಸುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. 

ADVERTISEMENT

‘ಒಂದು ವಾರದಿಂದ ತೆರವು ಪ್ರಕ್ರಿಯೆ ಚುರುಕುಗೊಂಡಿದ್ದು, ಈಗಾಗಲೇ 50ಕ್ಕೂ ಹೆಚ್ಚು ಅಂಗಡಿಗಳನ್ನು ಖಾಲಿ ಮಾಡಲಾಗಿದೆ. ಅಂಗಡಿಕಾರರೇ ಸ್ವಯಂಪ್ರೇರಿತರಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಖುಲ್ಲಾ ಮಾಡಿಕೊಡಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ’ ಎನ್ನುತ್ತಾರೆ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಘನಶ್ಯಾಮ್ ಪ್ರಭು.  

‘ಈ ಭಾಗದ ವ್ಯಾಪಾರಿಗಳು ಪ್ರತಿ ಜಾತ್ರೆಯ ಸಂದರ್ಭದಲ್ಲೂ ತಮ್ಮ ನೆಲೆ ಬದಲಿಸುವುದು ವಾಡಿಕೆ. ಬಿಡ್ಕಿಬಯಲು ಹಾಗೂ ಕೋಣನಬಿಡ್ಕಿ ಪ್ರದೇಶದ ಅಂಗಡಿಗಳು ಖಾಲಿಯಾದ ನಂತರ ಮಾರಿಕಾಂಬಾ ದೇವಸ್ಥಾನದಿಂದ ಜಾತ್ರಾ ತಾತ್ಕಾಲಿಕ ಅಂಗಡಿಗಳಿಗೆ, ಅಮ್ಯೂಸ್‍ಮೆಂಟ್‍ಗಳಿಗೆ ಜಾಗ ಹರಾಜು ಮಾಡಲಾಗುತ್ತದೆ. ರಾಜ್ಯ, ಹೊರ ರಾಜ್ಯದಿಂದ ಅಂಗಡಿಕಾರರು ಹರಾಜಿನಲ್ಲಿ ಪಾಲ್ಗೊಂಡು ಜಾಗ ಪಡೆದು ಅಂಗಡಿ ಹಾಕುತ್ತಾರೆ. ಜಾತ್ರೆ ನಂತರ ತಾತ್ಕಾಲಿಕ ಅಂಗಡಿಗಳು ಖಾಲಿಯಾದ ನಂತರ ಈಗಿರುವ ಹೆಚ್ಚಿನ ಅಂಗಡಿಕಾರರು ನಗರಸಭೆಯ ನಿಯಮಾನುಸಾರ ಮತ್ತೆ ಅಂಗಡಿಗಳನ್ನು ಜೋಡಿಸಿಕೊಳ್ಳುವುದು ರೂಢಿ’ ಎನ್ನುತ್ತಾರೆ ಅವರು. 

ಸಂಭ್ರಮಕ್ಕೆ ಸಜ್ಜಾಗುತ್ತಿರುವ ನಗರ:  ‘ದೇವಾಲಯದ ಗೋಡೆಗಳ ಮೇಲೆ ಪುನಶ್ಚೇತನಗೊಳ್ಳುತ್ತಿರುವ ಕಾವಿ ಕಲೆಯು ಕಲೆ ಮತ್ತು ಸಂಸ್ಕೃತಿಯ ಪ್ರೇಮಿಗಳನ್ನು ಸೆಳೆಯುತ್ತಿದ್ದರೆ ಮೈದಾನದಲ್ಲಿ ನಡೆಯುತ್ತಿರುವ ತೆರವು ಕಾರ್ಯವು ಜಾತ್ರೆಯ ಆಡಳಿತಾತ್ಮಕ ಶಿಸ್ತನ್ನು ಪ್ರತಿಬಿಂಬಿಸುತ್ತಿದೆ. ನಗರದ ಹೃದಯಭಾಗದಲ್ಲಿ ನಡೆಯುತ್ತಿರುವ ಈ ಬದಲಾವಣೆಗಳು ಜಾತ್ರೆ ಸಂಭ್ರಮಕ್ಕೆ ಸಜ್ಜಾಗುತ್ತಿರುವುದರ ಸಂಕೇತಗಳಾಗಿವೆ’ ಎಂಬುದು ನಗರ ನಿವಾಸಿಗಳ ಅಭಿಪ್ರಾಯ.  

ಳಾಂತರಗೊಳ್ಳುತ್ತಿರುವ ಅಂಗಡಿಕಾರರು ನಗರದ ವಿಕಾಸಾಶ್ರಮ ಬಯಲು ಹಾಗೂ ಆಸುಪಾಸಿನ ಇತರ ಸಾರ್ವಜನಿಕ ಜಾಗಗಳಲ್ಲಿ ತಮ್ಮ ತಾತ್ಕಾಲಿಕ ವ್ಯಾಪಾರಕ್ಕೆ ಸ್ಥಳ ಕಂಡುಕೊಳ್ಳುತ್ತಿದ್ದಾರೆ
-ಘನಶ್ಯಾಮ ಪ್ರಭು, ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.