ADVERTISEMENT

ಮಾರಿಕಾಂಬಾ ಜಾತ್ರೆ: ಅಮ್ಮನ ರಥಕ್ಕೆ ಸಜ್ಜಾಗುತ್ತಿದೆ ಹಸಿರು ಹೊದಿಕೆ!

ಮಾರಿಕಾಂಬಾ ಜಾತ್ರೆ: ವಂಶಪಾರಂಪರ್ಯ ಕಾಯಕದ ಕಥೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:41 IST
Last Updated 20 ಫೆಬ್ರುವರಿ 2026, 5:41 IST
ಶಿರಸಿ ಮಾರಿಕಾಂಬಾ ದೇವಿ ರಥ ನಿರ್ಮಾಣಕ್ಕೆ ಪೂರಕವಾಗಿ ವಾಟೆ ಗಳಗಳನ್ನು ದೇವಾಲಯದಲ್ಲಿ ಜೋಡಿಸಿರುವುದು
ಶಿರಸಿ ಮಾರಿಕಾಂಬಾ ದೇವಿ ರಥ ನಿರ್ಮಾಣಕ್ಕೆ ಪೂರಕವಾಗಿ ವಾಟೆ ಗಳಗಳನ್ನು ದೇವಾಲಯದಲ್ಲಿ ಜೋಡಿಸಿರುವುದು   

ಶಿರಸಿ: ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಆಚರಣೆಯು ಕೇವಲ ಧಾರ್ಮಿಕ ಚೌಕಟ್ಟಷ್ಟೇ ಅಲ್ಲ, ಅದರ ಹಿಂದೆ ಸಮುದಾಯಗಳ ಶ್ರಮ ಮತ್ತು ಪ್ರಕೃತಿಯ ಒಡನಾಟದ ಸಮ್ಮಿಳಿತವಿದೆ. 

ದೇವಸ್ಥಾನದ ಆವರಣದಲ್ಲಿ ರಥ ನಿರ್ಮಾಣದ ಧ್ವನಿ ಮತ್ತು ಚಟುವಟಿಕೆಗಳು ಗರಿಗೆದರಿದ್ದು, ಮರಗೆಲಸದ ಆಚಾರಿಗಳು ರಥದ ಬೃಹತ್ ಗಾಲಿ ಹಾಗೂ ಅಚ್ಚುಗಳನ್ನು ಜೋಡಿಸುವ ಕಾರ್ಯ ಮುಗಿಯುತ್ತಿದ್ದಂತೆ, ರಥಕ್ಕೆ ಸಾಂಪ್ರದಾಯಿಕ ಕಳೆ ನೀಡುವ ‘ವಾಟೆ’ ಅಲಂಕಾರದ ಪರ್ವ ಆರಂಭವಾಗಲಿದೆ.

ರಥದ ಮೇಲ್ಭಾಗವನ್ನು ಶೃಂಗರಿಸಲು ಬಳಸುವ ವಾಟೆ ಅಂಡೆಗಳ ರಾಶಿ ಈಗಾಗಲೇ ದೇವಸ್ಥಾನದ ಸಭಾ ಮಂಟಪವನ್ನು ಆಕ್ರಮಿಸಿಕೊಂಡಿವೆ. ಬಿದಿರಿನ ತಳಿಯದ್ದೇ ಆದರೂ ಪೊಳ್ಳಾದ ಮತ್ತು ಹಗುರವಾದ ಈ ವಾಟೆ ಕೋಲುಗಳು ರಥದ ಅಂದವನ್ನು ಹೆಚ್ಚಿಸುತ್ತವೆ. ಇದನ್ನು ಸಿದ್ಧಪಡಿಸುವುದು ಕೇವಲ ಕೆಲಸವಲ್ಲ, ಅದೊಂದು ವಂಶಪಾರಂಪರ್ಯವಾಗಿ ನಡೆದು ಬಂದ ಭಕ್ತಿಯ ಕಾಯಕ.

ADVERTISEMENT

ಬಂಡಲ ಭಾಗದ ಮರಾಠಿ ಕುಟುಂಬದವರು ಈ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರಥಕ್ಕೆ ಹಗ್ಗ ಬಿಗಿಯುವುದು, ಅಡಿಕೆ ದಬ್ಬೆಗಳನ್ನು ಕಟ್ಟುವುದು ಮತ್ತು ಪ್ರತಿ ವಾಟೆ ಕೋಲಿಗೂ ಆಕರ್ಷಕ ಪತಾಕೆಗಳನ್ನು ಸಿಕ್ಕಿಸಿ ರಥಕ್ಕೆ ಅಳವಡಿಸುವ ಕೆಲಸವನ್ನು ದೇವಸ್ಥಾನದ ಮರಾಠಿ ಕುಟುಂಬದ ಸುಮಾರು ಎಂಟು ಮಂದಿ ಸದಸ್ಯರು ಹಗಲಿರುಳು ಶ್ರಮಿಸಿ ಮಾಡುತ್ತಾರೆ. 

‘ರಥಕ್ಕೆ ಬಳಕೆಯಾಗುವ ಬಿದಿರು ಎಲ್ಲಿಂದ ಬರುತ್ತದೆ ಎಂಬುದು ಕುತೂಹಲಕಾರಿ. ರಾಗಿಹೊಸಳ್ಳಿ ಹೆಬ್ರೆ ಗ್ರಾಮಸ್ಥರು ಈ ಸೇವೆಯನ್ನು ದಶಕಗಳಿಂದ ಮಾಡುತ್ತಿದ್ದಾರೆ. ಬೆಣ್ಣೆಹಳ್ಳದ ಅಂಚಿನಲ್ಲಿ ಬೆಳೆಯುವ, ಮುಳ್ಳಿಲ್ಲದ ಈ ವಿಶೇಷ ವಾಟೆಗಳನ್ನು ಸಂಗ್ರಹಿಸಲು ಗ್ರಾಮದ ಪ್ರತಿಯೊಬ್ಬರೂ ಕೈಜೋಡಿಸುತ್ತಾರೆ. ಹಳ್ಳಿಯ ಪ್ರತಿ ಮನೆಯಿಂದಲೂ ಈ ಬಿದಿರನ್ನು ಶೇಖರಿಸಿ ದೇವಸ್ಥಾನಕ್ಕೆ ತಲುಪಿಸಲಾಗುತ್ತದೆ. ಈಗಾಗಲೇ ಸುಮಾರು 5 ಸಾವಿರದಷ್ಟು ವಾಟೆಗಳು ಬಂದಿವೆ’ ಎನ್ನುತ್ತಾರೆ ಗ್ರಾಮಸ್ಥ ದೇವರಾಜ ಮರಾಠಿ. 

ಒಂದೆಡೆ ಗ್ರಾಮಸ್ಥರು ಕಾಡಿನಿಂದ ಬಿದಿರು ತರುತ್ತಿದ್ದರೆ, ಇತ್ತ ಶಿರಸಿ ನಗರದ ದರ್ಜಿಗಳು ರಥದ ಮೇಲೆ ಹಾರಾಡುವ ವರ್ಣರಂಜಿತ ಪತಾಕೆಗಳನ್ನು ಹೊಲಿಯುವುದರಲ್ಲಿ ನಿರತರಾಗಿದ್ದಾರೆ. ಈಗಾಗಲೇ ರಥ ಕಟ್ಟುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಚಾಲನೆ ಪಡೆದಿದ್ದು, ಅಂತಿಮವಾಗಿ ಮಾರಿಕಾಂಬೆಯು ಸರ್ವಾಲಂಕೃತ ರಥವನ್ನೇರಿ ಭಕ್ತರಿಗೆ ದರ್ಶನ ನೀಡಲು ಸನ್ನದ್ಧಳಾಗಲಿದ್ದಾಳೆ. ಪ್ರಕೃತಿ, ಸಂಪ್ರದಾಯ ಮತ್ತು ಸಮುದಾಯದ ಸಹಭಾಗಿತ್ವಕ್ಕೆ ಶಿರಸಿ ಮಾರಿಕಾಂಬಾ ಜಾತ್ರೆಯ ಈ ಪೂರ್ವ ಸಿದ್ಧತೆಗಳೇ ಸಾಕ್ಷಿಯಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.