ADVERTISEMENT

ಭಟ್ಕಳ: ಸಾವಯವ ಕೃಷಿಯಲ್ಲಿ ಯಶ ಕಂಡ ಪದ್ಮರಾಜ

ಮೋಹನ ನಾಯ್ಕ
Published 9 ಫೆಬ್ರುವರಿ 2024, 4:34 IST
Last Updated 9 ಫೆಬ್ರುವರಿ 2024, 4:34 IST
ಅಡಿಕೆ ಕೃಷಿಯಲ್ಲಿ ತೊಡಗಿರುವ ಪದ್ಮರಾಜ್ ಜೈನ್‌
ಅಡಿಕೆ ಕೃಷಿಯಲ್ಲಿ ತೊಡಗಿರುವ ಪದ್ಮರಾಜ್ ಜೈನ್‌   

ಭಟ್ಕಳ: ಕೃಷಿ ಚಟುವಟಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು, ರಾಸಾಯನಿಕ ಬಳಸದೇ ಅಪ್ಪಟ ಸಾವಯವ ರೀತಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ ತಾಲ್ಲೂಕಿನ ಹಾಡುವಳ್ಳಿ ನಿವಾಸಿ ಪದ್ಮರಾಜ್ ಜೈನ್.

ಸುಮಾರು ಆರು ಎಕರೆಗೂ ವಿಸ್ತಾರವಾದ ತೋಟದಲ್ಲಿ ಹಲವು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವಾರ್ಷಿಕವಾಗಿ ಅಂದಾಜು ₹8 ಲಕ್ಷದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. 

ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ಅನಾನಸ್, ಪಪ್ಪಾಯಿ, ಲವಂಗ, ಜಾಯಿಕಾಯಿ, ಕೊಕ್ಕೊ, ಮಾವು, ಗೇರು, ಮುರುಗಲ, ಹುಣಸೆ, ಲಿಂಬು ಹೀಗೆ ವಿವಿಧ ರೀತಿಯ ತೋಟಗಾರಿಕಾ ಬೆಳೆ ಬೆಳೆಯಲಾಗುತ್ತದೆ. ತೋಟಗಾರಿಕೆಯ ಜತೆಗೆ ಇವರು ಹೈನುಗಾರಿಕೆಯನ್ನೂ ಮಾಡುತ್ತಿದ್ದು, ದೇಸಿ ತಳಿಯ ಜಾನುವಾರನ್ನು ಸಾಕಿ ಹಾಲು ಮಾರಾಟ ಮಾಡಿ ಲಾಭ ಮಾಡುತ್ತಿದ್ದಾರೆ.

ADVERTISEMENT

ಕೃಷಿ, ತೋಟಗಾರಿಕೆ, ಹೈನುಗಾರಿಕೆ ಬಗ್ಗೆ ಡೆನ್ಮಾರ್ಕ್‌ ಸಂಸ್ಥೆ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಸೂಕ್ತ ತರಬೇತಿ ಪಡೆದಿರುವ ಇವರು ಕೃಷಿ, ತೋಟಗಾರಿಕೆ ಪ್ರವಾಸ, ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಅನೇಕ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಮಾಹಿತಿ ಪಡೆದು ಸಮಗ್ರ ಬೆಳೆಯ ಕೃಷಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಾಲಿ ಹೌಸ್ ನಿರ್ಮಿಸಿಕೊಂಡು ಎಲ್ಲ ಮಾದರಿಯ ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಊರಿನಲ್ಲಿ ಹಾಲಿನ ಡೈರಿಯನ್ನೂ ಸಮರ್ಪಕವಾಗಿ ಮುನ್ನಡೆಸುತ್ತಿರುವ ಪದ್ಮರಾಜ್ ಯುವ ಜನತೆಗೆ ಕೃಷಿ, ತೋಟಗಾರಿಕೆ ಬೆಳೆಗಳ ಜೊತೆಗೆ ಹೈನುಗಾರಿಕೆ ಒತ್ತು ನೀಡುವಂತೆ ಪ್ರೇರೇಪಿಸುತ್ತಿದ್ದಾರೆ.

‘ಶಾಲಾ ದಿನಗಳಿಂದಲೂ ಕೃಷಿ ಬಗ್ಗೆ ಹೆಚ್ಚಿನ ಒಲವು ಇತ್ತು. ಶಿಕ್ಷಣದ ಬಳಿಕ ಕೃಷಿಯಲ್ಲೇ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಸಾಂಪ್ರದಾಯಿಕತೆಯನ್ನು ಕೈಬಿಟ್ಟು ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆ ಮೂಲಕ ಕೃಷಿ ಚಟುವಟಿಕೆಯಲ್ಲಿ ಹೊಸತನ ಕಂಡುಕೊಳ್ಳಲು ಮುಂದಾಗಿದ್ದೇನೆ. ಆದರೆ, ಯಾವ ಕಾರಣಕ್ಕೂ ರಾಸಾಯನಿಕ ಬಳಸಬಾರದು ಎಂಬ ದೃಢ ನಿರ್ಧಾರ ನನ್ನದು. ಹೀಗಾಗಿ ಸಾವಯವ ಪದ್ಧತಿಗೆ ಆದ್ಯತೆ ನೀಡಲಾಗುತ್ತಿದೆ’ ಎನ್ನುತ್ತಾರೆ ಪದ್ಮರಾಜ್ ಜೈನ್.

ಅಡಿಕೆ ಕೃಷಿಯಲ್ಲಿ ಪದ್ಮರಾಜ್ ಜೈನ್‌ ತೊಡಗಿರುವುದು

ಸಮಗ್ರ ಕೃಷಿಯಿಂದ ಅಭಿವೃದ್ಧಿ ಸಾಧ್ಯ

‘ಇಂದಿನ ಯುವಕರು ಕೃಷಿಯತ್ತ ಆಸಕ್ತಿ ಕಳೆದುಕೊಂಡು ಕಡಿಮೆ ಸಂಬಳಕ್ಕೆ ನಗರಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಮನೆಯಲ್ಲೇ ಇದ್ದ ಕೃಷಿ ಭೂಮಿಯನ್ನೇ ಅಭಿವೃದ್ಧಿಪಡಿಸಿ ಸಮಗ್ರ ಕೃಷಿ ಮಾಡಿದರೆ ಖಂಡಿತ ಹೆಚ್ಚಿನ ಆದಾಯದ ಜೊತೆ ಸ್ವಾವಲಂಬಿ ಜೀವನ ನಡೆಸಬಹುದು. ಕೃಷಿಯಲ್ಲಿಯೇ ಲಕ್ಷಾಂತರ ಆದಾಯ ಗಳಿಕೆ ಸಾಧ್ಯವಿದೆ. ಬೆಳೆಗಳನ್ನು ಹತ್ತಿರದ ಮಾರುಕಟ್ಟೆಯಲ್ಲೇ ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದೇನೆ. ಕೃಷಿ ಬೆಳೆಗಳಿಂದ ರೈತರಿಗೆ ಕಡಿಮೆ ಲಾಭ ದೊರೆತರೆ ದಲ್ಲಾಳಿಗಳಿಗೆ ಹೆಚ್ಚಿನ ಲಾಭ ಸಿಗುತ್ತದೆಂಬ ಕೊರಗೂ ಇದೆ. ಬಹುಪಾಲು ಜನರು ಕೃಷಿಯಲ್ಲಿ ತೊಡಗಿಕೊಂಡರೆ ಈ ಸಮಸ್ಯೆ ನೀಗಿಸಲು ಸಾಧ್ಯವಾಗುತ್ತದೆ’ ಎಂಬುದು ಪದ್ಮರಾಜ್ ಜೈನ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.