ADVERTISEMENT

ಮನರೇಗಾ ಹೆಸರು ಬದಲಿಸುವ ನಿರ್ಧಾರವನ್ನು ಕೇಂದ್ರ ಕೈಬಿಡಬೇಕು: ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:11 IST
Last Updated 10 ಜನವರಿ 2026, 7:11 IST
<div class="paragraphs"><p>ಆರ್.ವಿ.ದೇಶಪಾಂಡೆ</p></div>

ಆರ್.ವಿ.ದೇಶಪಾಂಡೆ

   

ಹಳಿಯಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಎಂಜಿಎನ್‌ಆರ್‌ಜಿಎ) ಹೆಸರು ಬದಲಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಒತ್ತಾಯಿಸಿದರು. 

ತಮ್ಮ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಈಗ ನೂತನವಾಗಿ ಜಾರಿಗೆ ತಂದಿರುವ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಭರಿಸಬೇಕೆಂದು ಹೇಳಲಾಗಿದೆ. ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಬಾರ ಹೆಚ್ಚು ಮಾಡಿ ಸಮಸ್ಯೆ ಮಾಡಲಾಗುತ್ತಿದೆ. ಮುಂಬರುವ 15 ದಿನಗಳೊಳಗೆ ಯೋಜನೆಯನ್ನು ರದ್ದುಗೊಳಿಸಿ ಮೊದಲಿನಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಜಾರಿಗೆ ತರಬೇಕು. ಕೇಂದ್ರದ ಮೇಲೆ ಒತ್ತಡ ಹೇರಲು ನರೇಗಾ ಬಚಾವೋ ಆಂದೋಲನವನ್ನು ರಾಜ್ಯದಾದ್ಯಂತ ತಾಲ್ಲೂಕು ಮಟ್ಟದಿಂದ ಹೋರಾಟ ಮಾಡಲಾಗುವುದು ಎಂದರು.

ADVERTISEMENT

ತಾಲ್ಲೂಕಿನ ಕೇರವಾಡ ಗ್ರಾಮದ ಮಹರ್ಷಿ ವಾಲ್ಮೀಕಿ ಶಾಲೆಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ₹3.69  ಕೋಟಿ ಮಂಜೂರಾಗಿದೆ. ತಾಲ್ಲೂಕಿನ ಗರಡೊಳ್ಳಿ ಗ್ರಾಮವನ್ನು ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ಈಗಾಗಲೇ ಸಲ್ಲಿಸಲಾಗಿದೆ. ಪಂಚಾಯತರಾಜ್‌ ಇಲಾಖೆ 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ ರಸ್ತೆ ಒಳಚರಂಡಿ ಹಾಗೂ ಕುಡಿಯುವ ನೀರಿನ ಸೌಲಭ್ಯಗಳಂತಹ ಮೂಲಸೌಕರ್ಯ ಕಾಮಗಾರಿಗಳಿಗೆ ₹ 1ಕೋಟಿ ಅನುದಾನ ಒದಗಿಸಲಾಗಿದೆ ಎಂದರು.

ಕಾಳಿ ನದಿಯಿಂದ ಹಳಿಯಾಳ ತಾಲ್ಲೂಕಿನ ಕೆರೆ ಮತ್ತು ಬಾಂದರುಗಳಿಗೆ ನೀರು ತುಂಬಿಸುವ ಯೋಜನೆ ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣವಾಗಲಿದ್ದು ಪ್ರಾಯೋಗಿಕವಾಗಿ ಆರಂಭಿಸಲಾಗುವುದು. ಇದರಿಂದ 15,000 ಎಕರೆ ಜಮೀನು ನೀರಾವರಿಯಾಗಲಿದೆ. ದಾಂಡೇಲಿ ನಗರಸಭೆ ಒಳಚರಂಡಿ ವ್ಯವಸ್ಥೆ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ₹9.42 ಕೋಟಿ ಮಂಜೂರಾತಿ ನೀಡಲಾಗಿದೆ. ಹಳಿಯಾಳದ ಪುರಸಭೆ ಪ್ರದೇಶದ ಒಳಚರಂಡಿ ನಿರ್ವಹಣೆ ವ್ಯವಸ್ಥೆಗೆ ₹10 ಕೋಟಿಗೂ ಹೆಚ್ಚು ವೆಚ್ಚದ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಅನುಮೋದನೆಗಾಗಿ ಮಂಡಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.