ADVERTISEMENT

ಶಿರಸಿ: ಜೂನ್ 21ರಂದು ದಶಲಕ್ಷ ಗಿಡ ನಾಟಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 13:08 IST
Last Updated 6 ಜೂನ್ 2025, 13:08 IST
ದಶ ಲಕ್ಷ ಗಿಡ ನೆಡುವ ಅಭಿಯಾನದ ಹಿನ್ನೆಲೆಯಲ್ಲಿ ಶಿರಸಿಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಾಂಛನವನ್ನು ರವೀಂದ್ರ ನಾಯ್ಕ ಬಿಡುಗಡೆ ಮಾಡಿದರು
ದಶ ಲಕ್ಷ ಗಿಡ ನೆಡುವ ಅಭಿಯಾನದ ಹಿನ್ನೆಲೆಯಲ್ಲಿ ಶಿರಸಿಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಾಂಛನವನ್ನು ರವೀಂದ್ರ ನಾಯ್ಕ ಬಿಡುಗಡೆ ಮಾಡಿದರು   

ಶಿರಸಿ: ಅರಣ್ಯವಾಸಿಗಳಲ್ಲಿ ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲಾದ್ಯಂತ 500ಕ್ಕೂ ಹೆಚ್ಚಿನ ಸ್ಥಳಗಳಲ್ಲಿ 10 ಲಕ್ಷ ಗಿಡ ನೆಡುವ ಅಭಿಯಾನವನ್ನು ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ನಗರದ ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಶುಕ್ರವಾರ ಅವರು ಗಿಡ ನೆಡುವ ಅಭಿಯಾನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕವಾಗಿ 10,571 ಚದರ ಕಿಮೀ ಪ್ರದೇಶ ಹೊಂದಿದೆ. ಅವುಗಳಲ್ಲಿ 8,500 ಚದರ ಕಿಮೀ ಅರಣ್ಯ ಪ್ರದೇಶವಾಗಿದೆ. ಆದರೂ ವಾಸ್ತವಿಕವಾಗಿ ಗಿಡ, ಮರ ಪ್ರಮಾಣ ಕಡಿಮೆ ಇರುವುದು ಉಲ್ಲೇಖನಾರ್ಹ ಎಂದರು. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭೀವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂದ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ. ಅಭಿಯಾನದಲ್ಲಿ ಪ್ರತಿ ಅರಣ್ಯವಾಸಿ ಕುಟುಂಬವು ಕನಿಷ್ಠ 10 ದೀರ್ಘಾಯುಷ್ಯ ಮತ್ತು ಪರಿಸರ ಅಭಿವೃದ್ದಿಗೆ ಸಂಬಂಧಿಸಿದ ಗಿಡ ನೆಡುವಂತೆ ಸೂಚಿಸಲಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳ 163 ಗ್ರಾಮ ಪಂಚಾಯಿತಿ ವ್ಯಾಪ್ತಿಯ 500ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಏಕಕಾಲದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಅಭಿಯಾನವು ಜಿಲ್ಲಾದ್ಯಂತ ಜುಲೈ 5ರವರೆಗೆ ಜರುಗುವುದು ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಭಿಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಸುಬ್ಬಣ್ಣ ಮಾಗೋಡ, ಎಂ.ಆರ್.ನಾಯ್ಕ ಕಂಡ್ರಾಜಿ, ನಾಗರಾಜ ಅಚನಳ್ಳಿ, ಸ್ವಾತಿ ಜೈನ್, ಕಲ್ಪನಾ ಪಾವಸ್ಕರ, ಯಶೋದಾ ನರೇಬೈಲ್, ಮಂಜಪ್ಪ ನಾಯ್ಕ ಬಂಕನಾಳ, ಎಂ.ಕೆ.ನಾಯ್ಕ ಬಂಕನಾಳ, ರೇಣುಕಾ ಸಿದ್ದಿ ಹಾಗೂ ಇತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.