ADVERTISEMENT

ತಂಡ್ರಕುಳಿ ದುರಂತ | ಪರಿಹಾರ ವಿತರಿಸಲು ಸಚಿವ ಹೆಬ್ಬಾರ ತಾಕೀತು

ಐ.ಆರ್.ಬಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 11:20 IST
Last Updated 6 ಜೂನ್ 2020, 11:20 IST
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಬಳಸಲು ಅಗತ್ಯವಾದ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಹಸ್ತಾಂತರಿಸಿದರು. ಶಾಸಕಿ ರೂ‍ಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಎಸ್.ಪಿ ಶಿವಪ್ರಕಾಶ ದೇವರಾಜು, ಜಿ.ಪಂ ಸಿ.ಇ.ಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಬಳಸಲು ಅಗತ್ಯವಾದ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಹಸ್ತಾಂತರಿಸಿದರು. ಶಾಸಕಿ ರೂ‍ಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಎಸ್.ಪಿ ಶಿವಪ್ರಕಾಶ ದೇವರಾಜು, ಜಿ.ಪಂ ಸಿ.ಇ.ಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.   

ಕಾರವಾರ: ಕುಮಟಾ ತಾಲ್ಲೂಕಿನ ತಂಡ್ರಕುಳಿಯಲ್ಲಿ ಎರಡು ವರ್ಷಗಳ ಹಿಂದೆ ಗುಡ್ಡ ಕುಸಿದು ಮೃತಪಟ್ಟವರ ಮತ್ತು ಆಸ್ತಿಗೆ ಹಾನಿಯಾದಕುಟುಂಬಗಳಿಗೆ ಶೀಘ್ರವಾಗಿ ಪರಿಹಾರ ವಿತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ತಂಡ್ರಕುಳಿ ದುರ್ಘಟನೆ ನಡೆದು ಎರಡು ವರ್ಷಕ್ಕೂ ಅಧಿಕ ಕಾಲವಾದರೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಇನ್ನೂ ಸಿಗದಿರುವುದು ವಿಷಾದಕರ. ಐ.ಆರ್.ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪರಿಹಾರ ವಿತರಿಸಲು ನಿರ್ಣಯ ತೆಗೆದುಕೊಳ್ಳಬೇಕು. ವೈಜ್ಞಾನಿಕವಾಗಿ ಪರಿಹಾರ ನೀಡಲು ಅಡಚಣೆಯಿದ್ದರೆ ಮಾನವೀಯ ನೆಲೆಯಲ್ಲಾದರೂ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕೂಡ ಸಂಬಂಧಿಸಿದ ಇಲಾಖೆಗಳು ವಿಫಲವಾಗುತ್ತಿವೆ. ಕೊಳವೆಬಾವಿ ಕೊರೆಸುವುದು, ಪೈಪ್‌ಲೈನ್ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಗಳು ಏಕಕಾಲದಲ್ಲಿ ಆಗಬೇಕು’ ಎಂದು ತಾಕೀತು ಮಾಡಿದರು.

‘ಗಂಭೀರ ಸಮಸ್ಯೆಯಿಲ್ಲ’:‘ಕೋವಿಡ್ 19 ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಕೋವಿಡ್ ಪೀಡಿತರಿಗೆ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲೂ ತಲಾ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

‘ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಒಟ್ಟು300 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗೆ ಹೊರಗಡೆಯಿಂದ ಬಂದವರಿಗೆ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಹೋಂಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ’ ಎಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ಚೆನ್ನಾಗಿ ಆಗಿದೆ. ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜದ ಸಂಗ್ರಹವಿದೆ. ಈಗಾಗಲೇ 4,600 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದೆ. ರಸಗೊಬ್ಬರ ಹಾಗೂ ಮೇವು ಅಗತ್ಯವಿರುವಷ್ಟು ಸಂಗ್ರಹವಿದೆ’ ಎಂದು ಮಾಹಿತಿ ನೀಡಿದರು.

ಸಭೆಯ ಬಳಿಕ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳಕ್ಕೆ ಪ್ರಕೃತಿ ವಿಕೋಪ ಸಂದರ್ಭ ಬಳಸಲು ಬೇಕಾಗುವ ಮುಂಜಾಗ್ರತಾ ಸಲಕರಣೆಗಳನ್ನು ಸಚಿವರು ವಿತರಿಸಿದರು. ಆಯುಷ್ ಇಲಾಖೆಯಿಂದ ಚವನ್ಪ್ರಾಶ್, ಅಮೃತಬಳ್ಳಿಯ ಮಾತ್ರೆಗಳನ್ನು ಸಭೆಗೆ ಹಾಜರಾದವರಿಗೆ ನೀಡಲಾಯಿತು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು,ಉಪ ವಿಭಾಗಾಧಿಕಾರಿಪ್ರಿಯಾಂಗಾ.ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.