ADVERTISEMENT

ಕಾರವಾರ: ಆಂಬುಲೆನ್ಸ್‌ ಖರೀದಿಗೇ ಶಾಸಕರ ಒಲವು

ಪ್ರದೇಶಾಭಿವೃದ್ಧಿ ನಿಧಿಯಿಂದ ಆಸ್ಪತ್ರೆಗಳ ಸೌಕರ್ಯ ಅಭಿವೃದ್ಧಿಗೆ ಒತ್ತಾಯ

ಸದಾಶಿವ ಎಂ.ಎಸ್‌.
Published 26 ಮೇ 2021, 19:30 IST
Last Updated 26 ಮೇ 2021, 19:30 IST
ಶಾಸಕರ ನಿಧಿಯಿಂದ ಖರೀದಿಸಲಾದ ಆಂಬುಲೆನ್ಸ್‌ಗಳು (ಸಾಂದರ್ಭಿಕ ಚಿತ್ರ)
ಶಾಸಕರ ನಿಧಿಯಿಂದ ಖರೀದಿಸಲಾದ ಆಂಬುಲೆನ್ಸ್‌ಗಳು (ಸಾಂದರ್ಭಿಕ ಚಿತ್ರ)   

ಕಾರವಾರ: ಕೋವಿಡ್ ನಿಯಂತ್ರಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಕನಿಷ್ಠ ಶೇ 25ರಷ್ಟನ್ನು ಬಳಕೆ ಮಾಡಲು ರಾಜ್ಯ ಸರ್ಕಾರವು ಅನುಮತಿ ನೀಡಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬೇರೆ ಬೇರೆ ಕೆಲಸಗಳನ್ನು ಮಾಡಲು ಅವಕಾಶವಿದ್ದರೂ ಜಿಲ್ಲೆಯ ಬಹುತೇಕ ಶಾಸಕರು ಆಂಬುಲೆನ್ಸ್ ಖರೀದಿಗೇ ಒಲವು ತೋರಿದ್ದಾರೆ. ಹಲವು ಈಗಾಗಲೇ ಜಿಲ್ಲೆಗೆ ಬಂದಿವೆ.

ಶಾಸಕರ ನಿಧಿಗೆ ಕ್ರಿಯಾಯೋಜನೆ ರೂಪಿಸುವಾಗ ಕನಿಷ್ಠ ₹ 50 ಲಕ್ಷವನ್ನು ಕೋವಿಡ್ 19 ಸಂಬಂಧಿತ ಕೆಲಸಗಳಿಗೆ ಹಾಗೂ ಆಸ್ಪತ್ರೆಗಳ ಸುಧಾರಣೆಗೆ ಬಳಸಿಕೊಳ್ಳಲು ಅನುಮತಿಯಿದೆ. ಅದರಂತೆ, ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲು ಸಾಧ್ಯವಿದೆ.

ಆಂಬುಲೆನ್ಸ್ ಖರೀದಿಯಿಂದ ಅವುಗಳ ಕೊರತೆ ನೀಗಲಿದೆ. ಜೊತೆಗೇ ಡಯಾಲಿಸಿಸ್, ಕಟ್ಟಡಗಳ ದುರಸ್ತಿ ಮುಂತಾದ ತುರ್ತು ಅಗತ್ಯಗಳನ್ನೂ ಈಡೇರಿಸಬೇಕಿದೆ ಎಂಬುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ADVERTISEMENT

ಯಾರಿಂದ ಯಾವುದಕ್ಕೆ ಬಳಕೆ?: ವಿಧಾನಸಭೆ ಸಭಾಧ್ಯಕ್ಷ, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರ ನಿಧಿಯಿಂದ ಎರಡು ಆಂಬುಲೆನ್ಸ್ ಖರೀದಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ತಮ್ಮ ನಿಧಿಯಿಂದ ತಲಾ ₹ 17 ಲಕ್ಷದಲ್ಲಿ ಎರಡು ಆಂಬುಲೆನ್ಸ್‌ ದೊರಕಿಸಿದ್ದಾರೆ. ಶಾಸಕ ಆರ್.ವಿ.ದೇಶಪಾಂಡೆ ಅವರ ಅನುದಾನದಲ್ಲಿ ಒಂದು ಆಂಬುಲೆನ್ಸ್ ಖರೀದಿಸಲಾಗಿದೆ.

ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರ ಅನುದಾನದಲ್ಲಿ ಒಟ್ಟು ನಾಲ್ಕು ಆಂಬುಲೆನ್ಸ್‌ಗಳನ್ನು ಖರೀದಿಸಲಾಗಿದೆ. 2018– 19ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ವೆಂಟಿಲೇಟರ್ ಹಾಗೂ 2019– 20ನೇ ಸಾಲಿನ ನಿಧಿಯಿಂದ ಮೂರು ಅತ್ಯಾಧುನಿಕ ಆಂಬುಲೆನ್ಸ್‌ಗಳು ಇದರಲ್ಲಿ ಸೇರಿವೆ. ಇದಕ್ಕಾಗಿ ಒಟ್ಟು ₹ 79.80 ಲಕ್ಷ ವ್ಯಯಿಸಲಾಗುತ್ತಿದೆ.

ಕುಮಟಾ– ಹೊನ್ನಾವರ ಶಾಸಕ ದಿನಕರ ಶೆಟ್ಟಿ, ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ₹ 20 ಲಕ್ಷ ವೆಚ್ಚದಲ್ಲಿ ಎರಡು ಆಂಬುಲೆನ್ಸ್ ನೀಡುತ್ತಿದ್ದಾರೆ. ಭಟ್ಕಳ– ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಅವರು ₹ 66 ಲಕ್ಷ ವೆಚ್ಚದಲ್ಲಿ ನಾಲ್ಕು ಆಂಬುಲೆನ್ಸ್‌ಗಳನ್ನು‌ ಖರೀದಿ‌ಸಿದ್ದಾರೆ.

ಸಂಸದರ ನಿಧಿಯಿಲ್ಲ: ಎರಡು ವರ್ಷಗಳಿಂದ ಕೇಂದ್ರ ಸರ್ಕಾರವು ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಬಿಡುಗಡೆ ಮಾಡಿಲ್ಲ. ಒಟ್ಟು ₹ 10 ಕೋಟಿಯನ್ನು ಕೋವಿಡ್ ಸಂಬಂಧಿತ ಕೆಲಸಗಳಿಗೇ ಬಳಕೆ ಮಾಡಲಾಗುತ್ತಿದೆ.

‘ನಿರ್ವಹಣೆಗೆ ಹಣ ಎಲ್ಲಿಂದ?’: ‘ಕೇವಲ ಆಂಬುಲೆನ್ಸ್‌ಗಳನ್ನು ಖರೀದಿಸಿದರೆ ಸಾಲು, ಅವುಗಳ ನಿರ್ವಹಣೆಗೆ ಹಣ ಮೀಸಲಿಡಬೇಕು. ಚಾಲಕರ ವೇತನ, ವಾಹನದ ಇಂಧನ, ದುರಸ್ತಿಯಂಥ ಕೆಲಸಗಳಿಗೆ ಹಣ ಎಲ್ಲಿಂದ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು’ ಎನ್ನುತ್ತಾರೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ.

‘ಶಾಸಕರ ನಿಧಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಮ್ಲಜನಕ ಸೌಲಭ್ಯ ಇರುವ ಕೆಲವು ಹಾಸಿಗೆಗಳ ಸೌಕರ್ಯ ಒದಗಿಸಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಅವಕಾಶವಿದೆ. ಇದಕ್ಕೆ ಇಚ್ಛಾಶಕ್ತಿ ಬೇಕು’ ಎಂದು ಅವರು ಹೇಳುತ್ತಾರೆ.

**
ಶಾಸಕರ‌ ನಿಧಿಯಿಂದ ₹ 6 ಲಕ್ಷ ವೆಚ್ಚದ ಆಮ್ಲಜನಕ ಖರೀದಿಗೆ ಯೋಚಿಸಲಾಗಿದೆ. ಕೋವಿಡ್ ನಿರ್ವಹಣೆಗಾಗಿ ಅನುದಾನದಿಂದ ಒಟ್ಟು ₹ 72 ಲಕ್ಷ ವ್ಯಯಿಸಲಾಗಿದೆ.
- ಸುನೀಲ ನಾಯ್ಕ, ಭಟ್ಕಳ ಶಾಸಕ

*
ಜಿಲ್ಲೆಗೆ ಈ ಹಿಂದೆ ಕೆಲವು ಜನಪ್ರತಿನಿಧಿಗಳು ನೀಡಿದ ಆಂಬುಲೆನ್ಸ್‌ಗಳು ನಿರ್ವಹಣೆಯಿಲ್ಲದೇ ಮೂಲೆ ಗುಂಪಾಗಿವೆ. ಅಂಥ ಪರಿಸ್ಥಿತಿ ಇವುಗಳಿಗೂ ಬರಬಾರದು.
-ಮಾಧವ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.