ADVERTISEMENT

ಮಠಾಧೀಶರಿಗೆ ರಾಜಕೀಯ ಯಾಕೆ ಬೇಕು: ಬಸವರಾಜ ಹೊರಟ್ಟಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 6:05 IST
Last Updated 30 ನವೆಂಬರ್ 2020, 6:05 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಕಾರವಾರ: ‘ಮಠಾಧೀಶರಿಗೆ ರಾಜಕೀಯ ಯಾಕೆ ಬೇಕು? ಅಷ್ಟು ಆಸಕ್ತಿಯಿದ್ದರೆ ನಮ್ಮ ಜೊತೆ ವಿಧಾನಸೌಧಕ್ಕೆ ಬರಲಿ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಮುದಾಯಗಳ ಅಭಿವೃದ್ಧಿಗೆ ನಾವು ರಾಜಕಾರಣಿಗಳಿದ್ದೇವೆ. ಸ್ವಾಮೀಜಿಗಳು ಅವರ ಮಠದಲ್ಲಿದ್ದುಕೊಂಡು ಸಮಾಜವು ಶಾಂತವಾಗಿ ಇರುವಂತೆ ನೋಡಿಕೊಳ್ಳಬೇಕು. ಅದುಬಿಟ್ಟು ರಾಜಕಾರಣ ಯಾಕೆ ಬೇಕು’ ಎಂದು ಖಾರವಾಗಿ ಪ್ರಶ್ನಿಸಿದರು.

‘ಸರ್ಕಾರವು ಜಾತಿಗೊಂದು ನಿಗಮ ರಚಿಸಲು ಮುಂದಾಗಿರುವುದೇ ತಪ್ಪು. ಈ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶಿಸುವುದೂ ಸರಿಯಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಆನ್‌ಲೈನ್ ತರಗತಿಗಳ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಹೇಳಿಕೆಗಳು ಗೊಂದಲ ಮೂಡಿಸುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದು ಸರಿಯಿದೆ. ಶುಲ್ಕದ ಮೊತ್ತದಿಂದಲೇ ನಡೆಯುವ ಹಲವು ಶಾಲೆಗಳಿವೆ. ಕಾರಿನಲ್ಲಿ ಮಕ್ಕಳನ್ನು ಕರೆದುಕೊಂಡು ಬರುವ ಮಂದಿಯಿಂದ (ಶ್ರೀಮಂತರಿಂದ) ಶುಲ್ಕ ಪಡೆದರೆ ತಪ್ಪೇನಿದೆ’ ಎಂದು ಅವರು ಪ್ರಶ್ನಿಸಿದರು.

‘ಶಿಕ್ಷಣದ ವಿಚಾರದಲ್ಲಿ ನನ್ನ ಅನುಭವವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ನಾನು ಸಿದ್ಧನಿದ್ದೇನೆ. ಎರಡೇ ದಿನಗಳಲ್ಲಿ ಎಲ್ಲ ಗೊಂದಲಗಳನ್ನೂ ಬಗೆಹರಿಸ್ತೇನೆ. ಆದರೆ, ನನ್ನ ಮಾತನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.