ADVERTISEMENT

ಕಷ್ಟದಲ್ಲಿ ಕಾರ್ಮಿಕರ ಕೈ ಹಿಡಿದ ಸಹಾಯಧನ

ಜಿಲ್ಲೆಯ 8,575 ಮಂದಿಗೆ ಈಗಾಗಲೇ ಹಣ ಪಾವತಿ: ಉಳಿದವರಿಗೆ ಶೀಘ್ರವೇ ಸಿಗುವ ನಿರೀಕ್ಷೆ

ಸದಾಶಿವ ಎಂ.ಎಸ್‌.
Published 30 ಏಪ್ರಿಲ್ 2020, 19:30 IST
Last Updated 30 ಏಪ್ರಿಲ್ 2020, 19:30 IST
   

ಕಾರವಾರ:ಲಾಕ್‌ಡೌನ್ ಅವಧಿಯಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿರುವ 8,575 ಕಾರ್ಮಿಕರಿಗೆ ತಲಾ ₹ 2 ಸಾವಿರದಂತೆ ಸಹಾಯಧನವು ಅವರ ಬ್ಯಾಂಕ್‌ ಖಾತೆಗಳಿಗೆ ಈಗಾಗಲೇ ಪಾವತಿಯಾಗಿದೆ. ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯು ನೀಡುತ್ತಿರುವ ಈ ಧನ ಸಹಾಯವು ಕಾರ್ಮಿಕರಿಗೆ ತಕ್ಕಮಟ್ಟಿಗೆ ಸಹಕಾರಿಯಾಗಿದೆ.

‘ಜಿಲ್ಲೆಯಲ್ಲಿ ನೊಂದಾಯಿತ 65,600 ಮಂದಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿದ್ದಾರೆ. ಅವರ ಪೈಕಿ 8,575 ಮಂದಿಗೆ ಹಣ ಪಾವತಿಯಾಗಿರುವ ಬಗ್ಗೆ ಮಂಡಳಿಯಿಂದಗುರುವಾರ ಇ–ಮೇಲ್ ಬಂದಿದೆ. ಜಿಲ್ಲೆಯಿಂದ ಈಗಾಗಲೇ 17,500ಕ್ಕೂ ಅಧಿಕ ಕಾರ್ಮಿಕರ ಮಾಹಿತಿಗಳನ್ನು ಮಂಡಳಿಗೆ ರವಾನಿಸಲಾಗಿದೆ. ದಿನನಿತ್ಯವೂ 1,500 ಮಂದಿಯ ಮಾಹಿತಿಗಳನ್ನು ಪರಿಶೀಲಿಸಿ ಕಳುಹಿಸಲಾಗುತ್ತಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ತಿಳಿಸಿದರು.

‘ಕಾರ್ಮಿಕರ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ, ಐ.ಎಫ್‌.ಎಸ್.ಸಿ ಕೋಡ್ ವಿವರಗಳು ಇಲಾಖೆಯ ಬಳಿ ಏಕಕಾಲಕ್ಕೆ ಲಭ್ಯವಿರುವುದಿಲ್ಲ. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಇಲಾಖೆಯ ಇನ್‌ಸ್ಪೆಕ್ಟರ್‌ಗಳು ಮಾಹಿತಿ ಕಲೆಹಾಕಿ ಜಿಲ್ಲಾ ಕಚೇರಿಗೆ ಕಳುಹಿಸುತ್ತಾರೆ. ಬಳಿಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮಂಡಳಿಯ ಕೇಂದ್ರ ಕಚೇರಿಗೆ ರವಾನಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕಾರ್ಮಿಕರಿಗೆ ಹಣ ಸಿಗುವುದಿಲ್ಲ ಎಂಬ ಆತಂಕ ಅನಗತ್ಯ. ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಕಳುಹಿಸುವುದು ಸವಾಲಿನ ಕೆಲಸವಾಗಿದೆ. ಒಂದುವೇಳೆ ಪರಿಶೀಲನೆಯಲ್ಲಿ ತಪ್ಪಾದರೆ ಒಬ್ಬರೇ ಕಾರ್ಮಿಕರಿಗೆ ಎರಡು ಬಾರಿ ಹಣ ಪಾವತಿಯಾಗಬಹುದು. ಅದೇರೀತಿ, ಬೇರೆಯವರಿಗೆ ಅನ್ಯಾಯವಾಗಬಹುದು. ಹಾಗಾಗಿ ಎಲ್ಲವನ್ನೂ ಪರಿಶೀಲಿಸಿ ಕಳುಹಿಸುವ ಕಾರಣ ಸ್ವಲ್ಪ ವಿಳಂಬವಾಗಬಹುದು. ಈ ಬಗ್ಗೆ ಕಾರ್ಮಿಕರಿಗೆ ಅನುಮಾನ ಬೇಡ’ ಎಂದು ಭರವಸೆ ನೀಡಿದರು.

‘ಇನ್ನೂ ಮಾಹಿತಿ ಬಂದಿಲ್ಲ’:‘ಲಾಕ್‌ಡೌನ್‌ಗೂ ಮೊದಲು ಜಿಲ್ಲೆಯಲ್ಲಿ ಕೆಲಸಕ್ಕೆ ಬಂದು ಸಿಲುಕಿರುವ ಹೊರ ರಾಜ್ಯಗಳ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಕಾರ್ಮಿಕ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.

‘ಬೇರೆ ರಾಜ್ಯಗಳಲ್ಲಿರುವ ನಮ್ಮ ರಾಜ್ಯದ ಕಾರ್ಮಿಕರ ಮಾಹಿತಿ ನೀಡುವಂತೆ ನಮ್ಮ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸರ್ಕಾರದ ನಿರ್ಧಾರ ಶೀಘ್ರವೇ ಪ್ರಕಟವಾಗಬಹುದು’ ಎಂದು ಹೇಳಿದರು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಉತ್ತರ ಕನ್ನಡಕ್ಕೆ ಬಂದು ಬಾಕಿಯಾಗಿದ್ದ 272 ಕಾರ್ಮಿಕರನ್ನು ಏ.28ರಂದು ಅವರ ಊರುಗಳಿಗೆ ಕಳುಹಿಸಿಕೊಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.