
ಕಾರವಾರ: ಮಳೆಗಾಲ ಮುಗಿದ ಬೆನ್ನಲ್ಲೇ ಮಂಗನ ಕಾಯಿಲೆಯ ಎಂಡಮಿಕ್ ಪ್ರದೇಶದಲ್ಲೇ 3 ಮಂಗಗಳ ಸಾವು ಆತಂಕ ಹುಟ್ಟಿಸಿದೆ. ಕಾಯಿಲೆ ಹರಡಬಹುದಾದ 5 ತಾಲ್ಲೂಕುಗಳಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದೆ.
ಅಕ್ಟೋಬರ್‌ನಿಂದ ಡಿಸೆಂಬರ್ ಮೊದಲ ವಾರದ ಅವಧಿಯಲ್ಲಿ ಸಿದ್ದಾಪುರ ತಾಲ್ಲೂಕಿನ ಹೇರೂರು, ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಮತ್ತು ಹಾರವಾಡದಲ್ಲಿ ಮಂಗಗಳು ಸಾವನಪ್ಪಿವೆ. ಈ ಹಿಂದೆ ಮಂಗನ ಕಾಯಿಲೆ ಪತ್ತೆಯಾದ ಪ್ರದೇಶಗಳಾಗಿದ್ದರಿಂದ ಈ ಭಾಗದಲ್ಲಿ ಕಟ್ಟೆಚ್ಚರವಹಿಸಲಾಗಿದೆ.
ಆರೋಗ್ಯ ಇಲಾಖೆಯು ಜಿಲ್ಲೆಯ 7 ತಾಲ್ಲೂಕುಗಳನ್ನು ಮಂಗನ ಕಾಯಿಲೆ ಕಾಣಿಸಿಕೊಳ್ಳುವ ಎಂಡಮಿಕ್ (ಕಾಯಿಲೆ ಪದೇ ಪದೇ ಕಾಣಿಸಿಕೊಳ್ಳುವ ವ್ಯಾಪ್ತಿ) ಪ್ರದೇಶಗಳೆಂದು ಈ ಹಿಂದೆ ಗುರುತಿಸಿತ್ತು. ಈ ಬಾರಿ 5 ತಾಲ್ಲೂಕುಗಳನ್ನು ಎಂಡಮಿಕ್ ಎಂದು ಗುರುತಿಸಲಾಗಿದೆ. ಸಿದ್ದಾಪುರ, ಹೊನ್ನಾವರ, ಜೊಯಿಡಾ, ಅಂಕೋಲಾ ಮತ್ತು ಶಿರಸಿ ಈ ಪಟ್ಟಿಯಲ್ಲಿವೆ.
‘5 ತಾಲ್ಲೂಕಿನ ಇಡೀ ಪ್ರದೇಶ ಮಂಗನ ಕಾಯಿಲೆ ಕಾಣಿಸಿಕೊಳ್ಳುವುದಿಲ್ಲ. ಈ ಹಿಂದೆ ಕಾಯಿಲೆ ಹರಡಿದ್ದ ಮತ್ತು ಹರಡಬಹುದಾದ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಎಂಡಮಿಕ್ ಪ್ರದೇಶ ಎಂದು ಗುರುತಿಸಲಾಗಿದೆ. ಸಿದ್ದಾಪುರದ ಬಿಳಗಿ, ದೊಡ್ಮನೆ, ಕ್ಯಾದಗಿ, ಕೊರ್ಲಕೈ, ಕೋಲಸಿರ್ಸಿ, ಹೇರೂರು, ಕಾನಸೂರು. ಹೊನ್ನಾವರದ ಗೇರುಸೊಪ್ಪ, ಖರ್ವಾ, ಸಾಲ್ಕೋಡ. ಜೊಯಿಡಾದ ಕುಂಬಾರವಾಡ, ಉಳವಿ. ಅಂಕೋಲಾದ ಹಟ್ಟಿಕೇರಿ, ಹಾರವಾಡ. ಶಿರಸಿಯ ರೇವಣಕಟ್ಟಾ ಈ ಪಟ್ಟಿಯಲ್ಲಿವೆ’ ಎಂದು ಮಂಗನ ಕಾಯಿಲೆ (ಕೆಎಫ್‌ಡಿ) ಚಿಕಿತ್ಸಾ ಕೇಂದ್ರದ ಅಧೀಕ್ಷಕ ಡಾ.ಸತೀಶ ಶೇಟ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೃತಪಟ್ಟಿದ್ದ ಮೂರು ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ, ರೋಗಾಣು ಪತ್ತೆಗೆ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮಂಗನ ಕಾಯಿಲೆಯ ಎಂಡಮಿಕ್ ಭಾಗಗಳಲ್ಲಿ ಪ್ರತಿ ಮನೆಗೆ ಜಾಗೃತಿ ಕರಪತರಗಳನ್ನು ಹಂಚಲಾಗುತ್ತಿದೆ. ಉಣ್ಣೆಯಿಂದ ಹರಡುವ ಕಾಯಿಲೆ ಇದಾಗಿರುವುದರಿಂದ ಅರಣ್ಯ ಪ್ರದೇಶಕ್ಕೆ ತೆರಳುವ ಮುನ್ನ ಉಣ್ಣೆ ಕಚ್ಚದಂತೆ ಎಚ್ಚರಿಕೆಗೆ ಸವರಿಕೊಳ್ಳಲು ಡೆಪಾ ತೈಲವನ್ನೂ ಪ್ರತಿ ಮನೆಗೆ ವಿತರಿಸಲಾಗುತ್ತಿದೆ’ ಎಂದು ವಿವರಿಸಿದರು.
ಮಂಗನ ಕಾಯಿಲೆ ತಡೆಗೆ ಈ ಬಾರಿ ಮಳೆಗಾಲ ಮುಗಿದ ಬೆನ್ನಲ್ಲೇ ಎಂಡಮಿಕ್ ಪ್ರದೇಶಗಳಲ್ಲಿ ಜಾಗೃತಿ ಕಾರ್ಯದ ಜೊತೆಗೆ ಜ್ವರದಿಂದ ಬಳಲುವವರ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಕೆಲಸ ನಡೆದಿದೆಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ
ಆರಂಭಗೊಳ್ಳದ ಪ್ರಯೋಗಾಲಯ
ಮಂಗನ ಕಾಯಿಲೆ ಜಿಲ್ಲೆಯ ಶಿರಸಿ ಸಿದ್ದಾಪುರ ಭಾಗದಲ್ಲೇ ಹೆಚ್ಚಿದ್ದ ಕಾರಣಕ್ಕೆ ಶಿರಸಿಯಲ್ಲಿ ಕೆಎಫ್‌ಡಿ ಪತ್ತೆ ಪ್ರಯೋಗಾಲಯ ಆರಂಭಿಸುವುದಾಗಿ ಸರ್ಕಾರ ಘೋಷಿಸಿತ್ತು. ಕೆಲ ತಿಂಗಳ ಹಿಂದೆ ಶಿರಸಿಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ.ದಿನೇಶ್ ಗುಮಡೂರಾವ್ ಪ್ರಯೋಗಾಲಯ ಸ್ಥಾಪನೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ್ದರು. ಆದರೆ ಈವರೆಗೂ ಪ್ರಯೋಗಾಲಯ ಆರಂಭಗೊಂಡಿಲ್ಲ. ರೋಗ ಲಕ್ಷಣಗಳನ್ನು ಒಳಗೊಂಡಿದ್ದವರ ರಕ್ತ ಮಾದರಿಯನ್ನು ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸುವ ಅನಿವಾರ್ಯತೆ ಈಗಲೂ ಮುಂದುವರಿದಿದೆ. ‘ಪ್ರಯೋಗಾಲಯಕ್ಕೆ ಮಂಜೂರಾತಿ ದೊರೆತಿದ್ದು ತಜ್ಞ ಸಿಬ್ಬಂದಿ ನೇಮಕಾತಿಗೆ ಪ್ರಕ್ರಿಯೆ ನಡೆದಿದೆ. ಕೆಲವೇ ದಿನದೊಳಗೆ ಕಾರ್ಯಾರಂಭಿಸಲಿದೆ’ ಎಂದು ಕೆಎಫ್‌ಡಿ ಚಿಕಿತ್ಸಾ ಕೇಂದ್ರದ ಅಧೀಕ್ಷಕ ಡಾ.ಸತೀಶ ಶೆಟ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.