ADVERTISEMENT

ಯಲ್ಲಾಪುರ | ಗುಳ್ಳಾಪುರ ಜನರಿಗೆ ‘ಮಣ್ಣಿನ ಸೇತುವೆ’ ಅನಿವಾರ್ಯ

ಮೂರು ವರ್ಷ ಕಳೆದರೂ ಮರು ನಿರ್ಮಾಣವಿಲ್ಲ: ಗ್ರಾಮಸ್ಥರಿಂದಲೇ ವೆಚ್ಚ ಭರಿಸಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 4:21 IST
Last Updated 27 ನವೆಂಬರ್ 2024, 4:21 IST
ಯಲ್ಲಾಪುರ ತಾಲ್ಲೂಕು ಗುಳ್ಳಾಪುರದಲ್ಲಿ ಗಂಗಾವಳಿ ನದಿಗೆ ಮಣ್ಣು ತುಂಬಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣ ಕಾರ್ಯ ನಡೆಯಿತು
ಯಲ್ಲಾಪುರ ತಾಲ್ಲೂಕು ಗುಳ್ಳಾಪುರದಲ್ಲಿ ಗಂಗಾವಳಿ ನದಿಗೆ ಮಣ್ಣು ತುಂಬಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣ ಕಾರ್ಯ ನಡೆಯಿತು   

ಯಲ್ಲಾಪುರ: ತಾಲ್ಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಪುರ ಸೇತುವೆ ಕುಸಿದು ಮೂರು ವರ್ಷ ಕಳೆದರೂ ಮರು ನಿರ್ಮಾಣಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗಂಗಾವಳಿ ನದಿಗೆ ಮಣ್ಣು ತುಂಬಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಿದ್ದಾರೆ.

ಈ ಹಿಂದೆ ಇದ್ದ ಸೇತುವೆ ಕುಸಿದ ಸ್ಥಳದ ಕೆಳಭಾಗದಲ್ಲಿ ನದಿಗೆ ಮಣ್ಣು ತುಂಬುವ ಕೆಲಸ ಕಳೆದ ನಾಲ್ಕು ದಿನಗಳಿಂದ ಭರದಿಂದ ನಡೆಯಿತು. ಮಂಗಳವಾರ ಸಂಜೆ ಮಣ್ಣಿನ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

‘ಗುಳ್ಳಾಪುರದಲ್ಲಿ ಸೇತುವೆ ನಿರ್ಮಿಸಿ ಕೊಡುವಂತೆ ಕಳೆದ ಮೂರು ವರ್ಷಗಳಿಂದಲೂ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪದೇ ಪದೇ ಮನವಿ ಮಾಡುತ್ತಿದ್ದೇವೆ. ಸೇತುವೆ ಮಂಜೂರಾಗಿದೆ. ಹಣಕಾಸಿನ ಕೊರತೆ ಇದೆ. ಸೇತುವೆ ಆಗೇ ಆಗುತ್ತದೆ ಎಂದು ಅವರು ಸಮಜಾಯಿಷಿ ನೀಡುತ್ತಲೇ ಬಂದಿದ್ದಾರೆ. ಸೇತುವೆ ಮರುನಿರ್ಮಾಣ ಆಗುವವರೆಗೆ ತುರ್ತು ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸುತ್ತಿದ್ದೇವೆ’ ಎಂದು ರಸ್ತೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡೋಂಗ್ರಿ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ಭಟ್ಟ ಹೇಳಿದರು.

ADVERTISEMENT

‘ಒಂದು ಜೆಸಿಬಿ, 2 ಟ್ರ್ಯಾಕ್ಟರ್ ಬಳಸಿ ಅಂದಾಜು ನಾಲ್ಕು ದಿನಗಳಲ್ಲಿ ಈ ಮಣ್ಣಿನ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ನಿರ್ಮಿಸಲು ಅಂದಾಜು 250 ಟ್ರ್ಯಾಕ್ಟರ್ ಮಣ್ಣು ಹಾಕಲಾಗುತ್ತಿದೆ. ನೀರು ಹೊರ ಹೋಗಲು ಅಳವಡಿಸಲಾದ 2 ಪೈಪ್‌ನ ಸುತ್ತ ಕಲ್ಲು, ರೇತಿ ಮೂಟೆ ಹಾಕುವುದು ಮೊದಲಾದ ಕೆಲಸಕ್ಕೆ ಗ್ರಾಮಸ್ಥರು ಸ್ವಯಂ ಸ್ಪೂರ್ತಿಯಿಂದ ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯಲ್ಲಿ ಮಣ್ಣಿನ ರಸ್ತೆ ನಿರ್ಮಿಸಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

‘ಅಂದಾಜು 200 ಮೀಟರ್ ಉದ್ದದ ಈ ಮಣ್ಣಿನ ರಸ್ತೆ ನಿರ್ಮಾಣಕ್ಕೆ ಸರಾಸರಿ ₹1 ಲಕ್ಷ ವೆಚ್ಚವಾಗುತ್ತಿದೆ. ಗ್ರಾಮ ಪಂಚಾಯಿತಿ ಕೊಡುವ ಅಲ್ಪ ಮೊತ್ತ ಯಾವುದಕ್ಕೂ ಸಾಕಾಗುವುದಿಲ್ಲ. ಹೆಚ್ಚುವರಿ ವೆಚ್ಚವನ್ನು ಗ್ರಾಮಸ್ಥರೇ ಭರಿಸುತ್ತಿದ್ದಾರೆ’ ಎಂದೂ ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದಲ್ಲಿ ತಾತ್ಕಾಲಿಕ ಮಣ್ಣಿನ ಸೇತುವೆ ನಿರ್ಮಾಣಕ್ಕೆ ಶ್ರಮದಾನ ಮಾಡಿದ ಗ್ರಾಮಸ್ಥರು
ಗುಳ್ಳಾಪುರ ಸೇತುವೆ ಮರು ನಿರ್ಮಾಣ ಆಗುವವರೆಗೆ ತಾತ್ಕಾಲಿಕ ಮಣ್ಣಿನ ರಸ್ತೆಯನ್ನು ಪ್ರತಿವರ್ಷ ಜಿಲ್ಲಾಡಳಿತವೇ ನಿರ್ಮಿಸಿಕೊಡಬೇಕು. ಅದಕ್ಕಾಗಿ ಆಡಳಿತ ಅಗತ್ಯ ಹಣ ತೆಗೆದಿರಿಸಬೇಕು
ನಾರಾಯಣ ಭಟ್ ಜಾಯಿಕಾಯಿ ಗ್ರಾ.ಪಂ. ಸದಸ್ಯ

ಮೂವರು ಶಾಸಕರೂ ಒತ್ತಡ ಹೇರಲಿ

‘ಯಲ್ಲಾಪುರ ಶಿರಸಿ ಹಾಗೂ ಅಂಕೋಲಾ ತಾಲ್ಲೂಕುಗಳ ಗಡಿ ಭಾಗದ ಮಧ್ಯದಲ್ಲಿರುವ ಈ ಸೇತುವೆ ತ್ವರಿತವಾಗಿ ನಿರ್ಮಿಸುವ ನಿಟ್ಟಿನಲ್ಲಿ ಮೂರು ಕ್ಷೇತ್ರದ ಶಾಸಕರು ಒಂದಾಗಿ ಕೆಲಸ ಮಾಡಬೇಕು. ಶಿರಸಿ ತಾಲ್ಲೂಕಿನ ವಾನಳ್ಳಿ ಜಡ್ಡಿಗದ್ದೆ ಧೋರಣಗಿರಿ ಕಕ್ಕಳ್ಳಿ ಭಾಗದ ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲು ಅಗತ್ಯವಾದ ಈ ಸೇತುವೆ ನಿರ್ಮಾಣಕ್ಕೆ ಸಂಸದರೂ ಒತ್ತಡ ತರಬೇಕು’ ಎಂದು ಹೆಗ್ಗಾರಿನ ಪ್ರಸನ್ನ ಗುಡ್ಡೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.