
ಮುಂಡಗೋಡ: ಪಟ್ಟಣದ ಟಿಬೆಟಿಯನ್ ಕ್ಯಾಂಪ್ ರಸ್ತೆಯಲ್ಲಿರುವ ಕಾರಡಗಿ ಪೆಟ್ರೋಲ್ ಬಂಕ್‌ನಲ್ಲಿ ಚಾಲಕರಿಗೆ ಯಾವುದೇ ಮಾಹಿತಿ ನೀಡದೇ, ಸಿ.ಎನ್.ಜಿ(ಸಂಕುಚಿತ ನೈಸರ್ಗಿಕ ಅನಿಲ) ಬದಲು ಸಿ.ಬಿ.ಜಿ(ಸಂಕುಚಿತ ಜೈವಿಕ ಅನಿಲ) ಇಂಧನ ಹಾಕುತ್ತಿರುವುದರಿಂದ, ವಾಹನಗಳು ಮೈಲೇಜ್ ನೀಡುತ್ತಿಲ್ಲ. ಇದರಿಂದ ಹಲವು ಚಾಲಕರು ಮೋಸ ಹೋಗುತ್ತಿದ್ದಾರೆ ಎಂದು ಆರೋಪಿಸಿ, ಆಟೊ, ಟ್ಯಾಕ್ಸಿ ಚಾಲಕರು, ಪೆಟ್ರೋಲ್ ಬಂಕ್ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನಲ್ಲಿ ಒಂದೇ ಒಂದು ಸಿಎನ್‌ಜಿ ಇಂಧನದ ಬಂಕ್ ಇದ್ದು, ಸಿಎನ್‌ಜಿ ಇಂಧನ ಬಳಕೆಯಿಂದ ನೂರಾರು ಚಾಲಕರು ದುಡಿಯುತ್ತಿದ್ದಾರೆ. ಕೆಲವು ದಿನಗಳಿಂದ ಈ ಬಂಕ್‌ನಲ್ಲಿ ಸಿಎನ್‌ಜಿ ಬದಲು ಸಿಬಿಜಿ ಇಂಧನ ಹಾಕುತ್ತಿದ್ದಾರೆ. ಮೈಲೇಜ್‌ನಲ್ಲಿಯೂ ಅರ್ಧ ಕಡಿಮೆಯಾಗುತ್ತಿದ್ದು, ವಾಹನಗಳು ಎಲ್ಲೆಂದರಲ್ಲಿ ಬಂದ್ ಆಗಿ ನಿಲ್ಲುತ್ತಿವೆ. ಚಾಲಕರಿಗೆ ಸರಿಯಾದ ಮಾಹಿತಿ ನೀಡದೇ, ಬಂಕ್‌ನವರು ಸಿಎನ್‌ಜಿ ಬದಲು ಸಿಬಿಜಿ ಹಾಕುತ್ತ ಮೋಸ ಮಾಡುತ್ತಿದ್ದಾರೆ ಎಂದು ಆಟೊ, ಕಾರು ಚಾಲಕರು ಆರೋಪಿಸಿದರು.
‘ಸಿಎನ್‌ಜಿ ಇಂಧನ ಬಳಕೆ ಮಾಡುವ ವಾಹನಗಳಿಂದ ನಿತ್ಯ ದುಡಿಮೆ ಮಾಡುತ್ತಿದ್ದೇವೆ. ಸಿಎನ್‌ಜಿ ಹಾಗೂ ಸಿಬಿಜಿ ಮಾದರಿಯ ವಾಹನಗಳಿಗೆ ಎಂಜಿನ್ ಬೇರೆಯಾಗಿರುತ್ತದೆ. ಹೀಗಿರುವಾಗ ಸಿಎನ್‌ಜಿ ವಾಹನಗಳಿಗೆ ಸಿಬಿಜಿ ಇಂಧನ ಬಳಸಿದರೆ, ಮುಂದೆ ಆಗುವ ಅನಾಹುತಕ್ಕೆ ಹೊಣೆ ಯಾರು. ಎಲ್ಲೂ ಇಲ್ಲದ ಸಿಬಿಜಿ ಬಳಕೆ ಇಲ್ಲಿ ಏಕೆ ಎಂಬುದನ್ನು ಬಂಕ್ ಮಾಲೀಕರು ಸ್ಪಷ್ಟಪಡಿಸಬೇಕುʼ ಎಂದು ಚಾಲಕ ಉದಯ ಗೊಂದಳೆ ಆಗ್ರಹಿಸಿದರು.
‘ಈ ಹಿಂದೆಯೂ ಹೀಗೆ ಮಾಡಿದ್ದರು, ನಂತರ ಸರಿಪಡಿಸಿಕೊಂಡರು. ಸಿಎನ್‌ಜಿ ಮಾರಾಟಕ್ಕೆ ಅನುಮತಿ ಪಡೆದಿದ್ದಾರೆ. ಆದರೆ, ಗ್ರಾಹಕರ ಬೇಡಿಕೆ ಹೆಚ್ಚಿರುವ ಸಿಎನ್‌ಜಿ ಇಂಧನನ್ನು ಮಾರಾಟ ಮಾಡಲು ಬಂಕ್ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆʼ ಎಂದು ಚಾಲಕ ಇಮ್ತಿಯಾಜ್ ದೂರಿದರು.
ಸ್ಥಳಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಕಂದಾಯ ಇಲಾಖೆಯ ಆಹಾರ ನಿರೀಕ್ಷಕ ಸಂಜೀವ ಲಮಾಣಿ ಆಗಮಿಸಿ, ಬಂಕ್ ಮಾಲೀಕರಿಂದ ಮಾಹಿತಿ ಪಡೆದರು. ಆಟೊ, ಟ್ಯಾಕ್ಸಿ ಚಾಲಕ, ಮಾಲೀಕರ ಸಂಘದ ವತಿಯಿಂದ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಮನವಿ ನೀಡಲಾಯಿತು.
‘ ಸಿಬಿಜಿ ಮಾರಾಟ ಮಾಡಲು ಮೇಲಿನಿಂದ ಒತ್ತಡವಿದೆ. ಬೇಡಿಕೆಯಷ್ಟು ಸಿಎನ್‌ಜಿ ಪೂರೈಕೆ ಆಗುತ್ತಿಲ್ಲ. ಇದರಿಂದ ಸಿಬಿಜಿ ಇಂಧನ ಮಾರಾಟ ಮಾಡಲಾಗುತ್ತಿದೆ. ಜ.1ರಿಂದ ಸಿಎನ್‌ಜಿ ಇಂಧನ ಮಾರಾಟ ಮಾಡಲಾಗುವುದು. ಅಲ್ಲಿಯವರೆಗೆ ಸಮಯಾವಕಾಶ ನೀಡಬೇಕು’ ಎಂದು ಬಂಕ್ ಮಾಲೀಕ ಇರ್ಫಾನ್ ಅಹ್ಮದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.