ADVERTISEMENT

ಮುರುಡೇಶ್ವರ ಬೀಚ್: ನಿರ್ಬಂಧ ತೆರವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 15:18 IST
Last Updated 1 ಜನವರಿ 2025, 15:18 IST
ಮುರುಡೇಶ್ವರ ಕಡಲತೀರದಲಿ ಸುರಕ್ಷತಾ ಸಾಧನಗಳ ಬಳಕೆಯ ಬಗ್ಗೆ ಜೀವರಕ್ಷಕ ಸಿಬ್ಬಂದಿಗೆ ಪೊಲೀಸರು ಮಾಹಿತಿ ನೀಡಿದರು
ಮುರುಡೇಶ್ವರ ಕಡಲತೀರದಲಿ ಸುರಕ್ಷತಾ ಸಾಧನಗಳ ಬಳಕೆಯ ಬಗ್ಗೆ ಜೀವರಕ್ಷಕ ಸಿಬ್ಬಂದಿಗೆ ಪೊಲೀಸರು ಮಾಹಿತಿ ನೀಡಿದರು   

ಭಟ್ಕಳ: ಮುರುಡೇಶ್ವರ ಕಡಲ ತೀರವನ್ನು ಬುಧವಾರ ಸಂಜೆ 5 ಗಂಟೆಗೆ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಕೋಲಾರದ ವಸತಿ ಶಾಲೆಯ 4 ಮಕ್ಕಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ನಂತರ ಸುರಕ್ಷತೆಯ ಕಾರಣ ನೀಡಿ ಡಿ.11ರಿಂದ ಬೀಚ್‌ ಅನ್ನು ಸಾವಜನಿಕರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. 21 ದಿನಗಳ ಬಳಿಕ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಬೀಚ್‌ ನಿರ್ಬಂಧ ತೆರವು ಮಾಡಿದೆ.

ಪ್ರತ್ಯೇಕ ಈಜು ವಲಯ ಸ್ಥಳ ನಿಗದಿ:

ಮುರುಡೇಶ್ವರದ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಈಜಾಡಲು ಕಡಲತೀರದ ಸುರಕ್ಷಿತ 250 ಮೀಟರ್‌ ವಲಯವನ್ನು ಗುರುತಿಸಿ ಈಜು ವಲಯ ನಿಗದಿ ಮಾಡಲಾಗಿದೆ. ಇಲ್ಲಿ ಜಲಕ್ರೀಡೆಯಾಡುವ ಪ್ರವಾಸಿಗರ ಮೇಲೆ ನಿಗಾ ಇರಿಸಲು ಜೀವರಕ್ಷಕ ಸಿಬ್ಬಂದಿಗೆ ಸೂಚಿಸಲಾಗಿದೆ. ಈ ಹಿಂದೆ ಇದ್ದಂತಹ 6 ಜನ ಜೀವ ರಕ್ಷಕ ಸಿಬ್ಬಂದಿಯನ್ನು 12ಕ್ಕೆ ಏರಿಸಲಾಗಿದೆ. ಜೊತೆಗೆ ಜೀವರಕ್ಷಕ ಸಿಬ್ಬಂದಿಗೆ ಅಗತ್ಯ ಇರುವ ಸ್ಪೀಡ್‌ ಬೋಟ್‌, ಜೆಟ್‌ ಸ್ಕೈ, ಆಮ್ಲಜನಕ ಕಿಟ್‌ ಹಾಗೂ ಲೈಫ್ ಜಾಕೆಟ್‌ ಸಾಧನಗಳನ್ನು ಒದಗಿಸಲಾಗಿದೆ.

ಕಡಲ ತೀರದ ಅಲ್ಲಿಲ್ಲಿ ಆಳ ಸಮುದ್ರಕ್ಕಿಳಿಯದಂತೆ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರಿಗೆ ಎಚ್ಚರಿಸುವ ಕೆಲಸ ಮಾಡಲಾಗಿದೆ. ಜೀವರಕ್ಷಕ ಸಿಬ್ಬಂದಿ ಜೊತೆಗೆ ಕರಾವಳಿ ಕಾವಲು ಪಡೆ ಹಾಗೂ ಸ್ಥಳಿಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಮುರುಡೇಶ್ವರ ಪೊಲೀಸ್‌ ಠಾಣಾ ಪಿಎಸ್‌ಐ ಹಣುಮಂತಪ್ಪ ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

ನಿಟ್ಟುಸಿರು ಬಿಟ್ಟ ವ್ಯಾಪಾರಿಗಳು :

ಮುರುಡೇಶ್ವರ ಕಡಲತೀರದಲ್ಲಿ ಅಪಘಾತ ವಲಯಗಳ ಬಗ್ಗೆ ಸೂಚನಾ ಫಲಕ ಅಳವಡಿಸಿರುವುದು

ಬೀಚ್‌ ನಿರ್ಬಂಧದಿಂದಾಗಿ ಕಳೆದ 21 ದಿನಗಳಿಂದ ನಿರೀಕ್ಷಿಸಿದ ವ್ಯಾಪಾರು ವಹಿವಾಟು ಇಲ್ಲದೇ ಕಂಗೆಟ್ಟ ವ್ಯಾಪಾರಿಗಳು ಬೀಚ್‌ ನಿರ್ಬಂಧ ತೆರವಿನಿಂದ ನಿಟ್ಟುಸಿರು ಬಿಟ್ಟಿದ್ದಾರೆ.

ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ಬೀಚ್‌ ನಿರ್ಬಂಧದಿಂದಾಗಿ ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡದೇ ಮುಂದೆ ತೆರಳುವುದರಿಂದ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಕಂಗಾಲಾಗಿದ್ದರು.

ಮುರುಡೇಶ್ವರದ ಕಡಲತೀರದಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.