ADVERTISEMENT

ಶಿವನ ಜಾಗರಣೋತ್ಸವಕ್ಕೆ ಮುರುಡೇಶ್ವರ ಸಜ್ಜು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 14:15 IST
Last Updated 24 ಫೆಬ್ರುವರಿ 2025, 14:15 IST
   

ಭಟ್ಕಳ : ಶಿವರಾತ್ರಿ ಅಂಗವಾಗಿ ಜಗತ್ ಪ್ರಸಿದ್ದ ಮುರುಡೇಶ್ವರದಲ್ಲಿ ನಡೆಯುವ ಅಹೋರಾತ್ರಿ ಜಾಗರಣೋತ್ಸವಕ್ಕೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ.

ಸಚಿವ ಮಂಕಾಳ ವೈದ್ಯ ಅವರ ನೇತೃತ್ವದಲ್ಲಿ ನಡೆಯುವ ಜಿಲ್ಲಾಮಟ್ಟದ ಎರಡನೇ ವರ್ಷದ ಅಹೋರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕಲಾವಿದರು, ಗಾಯಕರು, ನೃತ್ಯ ತಂಡಗಳು ಪ್ರೇಕ್ಷರನ್ನು ರಂಜಿಸಲಿದ್ದಾರೆ.

ಫೆ.26ರ ಸಂಜೆ 6ರಿಂದ ಫೆ.27ರ ಬೆಳಿಗ್ಗೆ 6ಗಂಟೆವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಗಾಯಕ ರಘುದೀಕ್ಷಿತ ಅವರ ರಸಮಂಜರಿ ಕಾರ್ಯಕ್ರಮ ಹಾಗೂ ಶ್ರೀ ಹರ್ಷ, ರಮೇಶ ಚಂದ್ರ ಸೇರಿದಂತೆ ಕನ್ನಡ ಚಲನಚಿತ್ರ  ಹಿನ್ನೆಲೆಯ ಗಾಯಕರ ಭಕ್ತಿ ರಸಮಂಜರಿಯ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ರಾಷ್ಟ್ರಮಟ್ಟದ ಕಲಾವಿದರಿಂದ ಡ್ಯಾನ್ಸ್‌ ಧಮಕಾ, ಫೈರ್ ಶೋ, ದೇಶದ ವಿವಿಧ ಭಾಗಗಳ ನೃತ್ಯಗಳ ಪ್ರದರ್ಶನವೂ ನಡೆಯಲಿದೆ.

ADVERTISEMENT

ಮುರುಡೇಶ್ವರದ ದೇವಸ್ಥಾನದ ಹಿಂಭಾಗ ಇರುವ ಬೃಹತ್ ಶಿವನ ಮೂರ್ತಿಗೆ ಲೇಸರ್ ಶೋ ನಡೆಯಲಿದ್ದು, ಲೇಸರ್‌ ಬೆಳಕಿನಲ್ಲಿ ಕಂಗೊಳಿಸುವ ಶಿವನಮೂರ್ತಿ ಭಕ್ತರ ಆಕರ್ಷಿಣೀಯ ಕೆಂದ್ರವಾಗಲಿದೆ. ಈ ಬಾರಿಯ ಜಾಗರಣೋತ್ಸವ ಕಾರ್ಯಕ್ರಮದಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚೂ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

‘ಮುರುಡೇಶ್ವರನ ಸನ್ನಿಧಿಯಲ್ಲಿ ಜನರು ಶಿವರಾತ್ರಿ ಜಾಗರಣೆ ಮಾಡಿ ಶಿವನ ಕೃಪೆಗೆ ಪಾತ್ರರಾಗಲಿ ಎನ್ನುವ ಆಶಯದಿಂದ ಎರಡನೇ ವರ್ಷದ ಅದ್ದೂರಿ ಜಾಗರಣೋತ್ಸವ ಆಯೋಜಿಸಲಾಗಿದೆ. ಶಿವನ ಧ್ಯಾನದ ಜೊತೆಗೆ ಭಕ್ತಿಯ ಪರಾಕಷ್ಠೆ ಮೆರೆಯಲು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ಆಗಮಿಸಲಿದ್ದಾರೆ’ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.