ADVERTISEMENT

ಪ್ರವಾಸಿಗರ ಹೈರಾಣಾಗಿಸಿದ ಕಿರಿದಾದ ರಸ್ತೆ

ವರ್ಷಾಂತ್ಯದ ಹಿನ್ನೆಲೆ:ವಿಭೂತಿ ಜಲಪಾತ, ಯಾಣಕ್ಕೆ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 8:45 IST
Last Updated 31 ಡಿಸೆಂಬರ್ 2025, 8:45 IST
ಗೋಕರ್ಣ–ವಡ್ಡಿ ರಾಜ್ಯ ಹೆದ್ದಾರಿ ನಡುವೆ ಯಾಣಕ್ಕೆ ಕ್ರಮಿಸುವ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದು.
ಗೋಕರ್ಣ–ವಡ್ಡಿ ರಾಜ್ಯ ಹೆದ್ದಾರಿ ನಡುವೆ ಯಾಣಕ್ಕೆ ಕ್ರಮಿಸುವ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವುದು.   

ಅಂಕೋಲಾ: ವರ್ಷಾಂತ್ಯ ಆಚರಣೆ, ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿಭೂತಿ ಜಲಪಾತ, ಸಮೀಪದ ಯಾಣಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಕಿರಿದಾದ ರಸ್ತೆ, ಮೂಲಸೌಕರ್ಯಗಳ ಕೊರತೆಯಿಂದ ಬಂದವರು ಹೈರಾಣಾಗಿದ್ದಾರೆ.

ವಿಭೂತಿ ಜಲಪಾತಕ್ಕೆ ಗೋಕರ್ಣ–ವಡ್ಡಿ ರಾಜ್ಯ ಹೆದ್ದಾರಿ ನಡುವೆ ಎರಡು ಕಿ.ಮೀ ಕಿರಿದಾದ ರಸ್ತೆಯಲ್ಲಿ ಕ್ರಮಿಸಿದ ನಂತರ ಒಂದು ಕಿ.ಮೀ ತುಂಬಾ ಸುರಕ್ಷಿತವಲ್ಲದ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಸಾಗಬೇಕು. ಅಲ್ಲದೇ, ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಬರುವುದರಿಂದ ವಾಹನ ನಿಲುಗಡೆಗೆ ಜಾಗದ ಕೊರತೆ ಉಂಟಾದ ದೂರು ಹೆಚ್ಚಿದೆ.

‘ಜಲಪಾತದ ಬಳಿ ಹೆಚ್ಚು ಜನ ಸೇರಿದ್ದರು. ಜನಜಂಗುಳಿಯ ಕಾರನದಿಂದ ದೂರದಿಂದಲೇ ಜಲಪಾತ ವೀಕ್ಷಿಸಬೇಕಾಯಿತು. ಸ್ಥಳದಲ್ಲಿ ಒಬ್ಬರು ಜೀವರಕ್ಷಕರ ಹೊರತಾಗಿ ಬೇರೆ ಸಿಬ್ಬಂದಿ ಇರಲಿಲ್ಲ. ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸದ ಕಾರಣಕ್ಕೆ ಹೆಚ್ಚು ಹೊತ್ತು ಇಲ್ಲಿ ಸಮಯ ಕಳೆಯಲಾಗಗಲಿಲ್ಲ’ ಎಂದು ಪ್ರವಾಸಿಗ ವೀರೇಶ್ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಜಲಪಾತದಲ್ಲಿ ಪ್ರವಾಸಿಗರು ಯಾವುದೇ ಸುರಕ್ಷಿತವಿಲ್ಲದೇ ಗಂಟೆಗಟ್ಟಲೆ ನೀರಿನಲ್ಲಿ ಈಜಾಡುತ್ತಾರೆ. ಕೆಲ ವರ್ಷಗಳ ಹಿಂದೆ ಇಬ್ಬರು ಪ್ರವಾಸಿಗರು ಸಾವನಪ್ಪಿದ್ದರು. ಆದರೂ, ಈವರೆಗೆ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಇದು ಪ್ರವಾಸೋದ್ಯಮ ಹಾಗೂ ಪೊಲೀಸ್ ಇಲಾಖೆಯ ಬೇಜವಾಬ್ದಾರಿತನ ತೋರುತ್ತಿದೆ’ ಎಂಬುದು ಸ್ಥಳೀಯರ ದೂರು.

‘20 ವರ್ಷಗಳ ಹಿಂದೆ ಕುಡ್ಸೆಂಪ್ ಯೋಜನೆಯಡಿಯಲ್ಲಿ ಈ ಭಾಗದಲ್ಲಿ ರಸ್ತೆ ನಿರ್ಮಾಣವಾದ ನಂತರ ಈವರೆಗೆ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಯಾಗಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಮೂಲಭೂತ ಸೌಕರ್ಯದ ಕೊರತೆಯಿಂದ ಹಾಗೂ ರಸ್ತೆ ಸಮಸ್ಯೆಯಿಂದ ಹಿಂದಿರುಗುತ್ತಿರುವುದು ಬೇಸರದ ಸಂಗತಿ’ ಎಂದು ಸ್ಥಳೀಯ ಮುಖಂಡ ಜಿ.ಎಂ.ಶೆಟ್ಟಿ ಹೇಳಿದರು.

ಸುರಕ್ಷತೆ ಕ್ರಮದ ಕುರಿತು ಪ್ರತಿಕ್ರಿಯೆಗೆ ಅಂಕೋಲಾ ಠಾಣೆಯ ಸಿಪಿಐ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತಅದರೂ ಅವರು ಕರೆ ಸ್ವೀಕರಿಸಲಿಲ್ಲ.

ವಿಭೂತಿ ಜಲಪಾತ ಯಾಣ ಸಂಪರ್ಕಿಸುವ ರಸ್ತೆ ಕಿರಿದಾಗಿರುವ ಕಾರಣ ಅಪಘಾತ ಹೆಚ್ಚುತ್ತಿದೆ. ಪ್ರವಾಸಿಗರು ತೊಂದರೆಗೆ ಒಳಗಾಗುತ್ತಿದ್ದಾರೆ. ರಸ್ತೆ ವಿಸ್ತರಣೆ ನಡೆಸುವ ಕೆಲಸ ನಡೆದರೆ ಉತ್ತಮ.
ಬಾಲಚಂದ್ರ ಶೆಟ್ಟಿ, ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷ

ರಸ್ತೆ ವಿಸ್ತರಣೆಗೆ ಸಮಸ್ಯೆ ‘ವಿಭೂತಿ ಜಲಪಾತಕ್ಕೆ ಹತ್ತಿರದಲ್ಲಿರುವ ಯಾಣಕ್ಕೆ ರಾಜ್ಯ ಹೆದ್ದಾರಿಯಿಂದ 3 ಕಿ.ಮೀ ಕ್ರಮಿಸಬೇಕು. ಈ ಮಾರ್ಗವು ಕಿರಿದಾಗಿದೆ. ಸಾಲು ಸಾಲು ರಜಾ ದಿನಗಳಲ್ಲಿ  ಕಿರಿದಾದ ರಸ್ತೆಯಲ್ಲಿ ಮೂರು ಕಿ.ಮೀ ಕ್ರಮಿಸಲು ಗಂಟೆಗಟ್ಟಲೆ ಕಾಯಬೇಕು ಅಲ್ಲದೇ ಪ್ರವಾಸಕ್ಕೆ ಬರುವ ಮಕ್ಕಳು ನಡೆದುಕೊಂಡೆ ಹೋಗುತ್ತಾರೆ. ಈ ಮಾರ್ಗವು ಅಂಕೋಲಾ ಉಪವಿಭಾಗದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ರಸ್ತೆಯ ಬದಿಯಲ್ಲಿ ಹಲವು ಕಡೆ ಮರಗಳಿರುವುದರಿಂದ ಅರಣ್ಯ ಇಲಾಖೆಯ ಸಹಕಾರ ದೊರಕದೆ ಇರುವುದರಿಂದ ರಸ್ತೆ ವಿಸ್ತರಣೆಗೆ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಸ್ಥಳೀಯರಾದ ಜಿ.ಎಂ.ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.