ADVERTISEMENT

ಕಾರವಾರ: ಸಂತ್ರಸ್ತರ ಖಾತೆ ಸೇರದ ಪರಿಹಾರ

ಫೋಟೊಶೂಟ್‌ಗೆ ನಾಲ್ವರಿಗೆ ಮಾತ್ರ ಹಂಚಿಕೆ?: ಕಚೇರಿಗೆ ಅಲೆದಾಡುತ್ತಿರುವ ಜನ

ಗಣಪತಿ ಹೆಗಡೆ
Published 12 ಜುಲೈ 2025, 4:26 IST
Last Updated 12 ಜುಲೈ 2025, 4:26 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂನ್ 21ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ನೌಕಾನೆಲೆ ಯೋಜನೆ ನಿರಾಶ್ರಿತರಿಗೆ ಬಿಡುಗಡೆಯಾದ ಹೆಚ್ಚುವರಿ ಪರಿಹಾರ ಮೊತ್ತದ ಚೆಕ್‌ಅನ್ನು ಶಾಸಕ ಸತೀಶ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರದರ್ಶಿಸಿದ್ದರು
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೂನ್ 21ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ನೌಕಾನೆಲೆ ಯೋಜನೆ ನಿರಾಶ್ರಿತರಿಗೆ ಬಿಡುಗಡೆಯಾದ ಹೆಚ್ಚುವರಿ ಪರಿಹಾರ ಮೊತ್ತದ ಚೆಕ್‌ಅನ್ನು ಶಾಸಕ ಸತೀಶ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರದರ್ಶಿಸಿದ್ದರು   

ಕಾರವಾರ: ನೌಕಾನೆಲೆ ಯೋಜನೆಗೆ ಭೂಮಿ ಕಳೆದುಕೊಂಡು ಮೂರು ದಶಕದ ಬಳಿಕ ಹೆಚ್ಚುವರಿ ಪರಿಹಾರದ ನಿರೀಕ್ಷೆಯಲ್ಲಿದ್ದ ಸಂತ್ರಸ್ತರಿಗೆ ಇನ್ನೂ ಪರಿಹಾರ ಕೈಸೇರಿಲ್ಲ. ಸಚಿವ, ಸಂಸದರ ಸಮ್ಮುಖದಲ್ಲಿ ನೆಪ ಮಾತ್ರಕ್ಕೆ ಪರಿಹಾರ ವಿತರಣೆ ಕಾರ್ಯಕ್ರಮ ನಡೆಯಿತೇ ಎಂಬ ಪ್ರಶ್ನೆ ಸಂತ್ರಸ್ತರಲ್ಲಿ ಮೂಡಿದೆ.

ನೌಕಾನೆಲೆ ಯೋಜನೆಗೆ ಭೂಮಿ ಕಳೆದುಕೊಂಡ ತಾಲ್ಲೂಕಿನ ಚೆಂಡಿಯಾ, ಅರಗಾ, ತೊಡೂರು ಗ್ರಾಮಗಳ ಸುಮಾರು 57 ಕುಟುಂಬಗಳಿಗೆ ಬಿಡುಗಡೆಯಾದ ₹10.47 ಕೋಟಿ ಹೆಚ್ಚುವರಿ ಪರಿಹಾರ ವಿತರಿಸುವ ಕಾರ್ಯಕ್ರಮ ಜೂನ್ 21ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದಿತ್ತು. ಅಂದು ನಾಲ್ವರು ಸಂತ್ರಸ್ತರ ಬ್ಯಾಂಕ್ ಖಾತೆಗೆ ಅಂದಾಜು ₹1 ಕೋಟಿಯಷ್ಟು ಮೊತ್ತದ ಪರಿಹಾರ ಜಮಾ ಮಾಡಿ, ಸಾಂಕೇತಿಕವಾಗಿ ಚೆಕ್ ವಿತರಿಸಲಾಗಿತ್ತು.

‘ಪರಿಹಾರ ಬಿಡುಗಡೆಯಾದ ಕುಟುಂಬಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಒಂದೆರಡು ದಿನದೊಳಗೆ ಪರಿಹಾರ ಮೊತ್ತ ಖಾತೆಗೆ ಜಮಾ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದರು. ತಿಂಗಳು ಸಮೀಪಿಸುತ್ತ ಬಂದರೂ ಈವರೆಗೆ ಖಾತೆಗೆ ನಯಾಪೈಸೆ ಜಮಾ ಮಾಡಿಲ್ಲ’ ಎಂದು ಚೆಂಡಿಯಾ ಗ್ರಾಮದ ಸಂತ್ರಸ್ತರೊಬ್ಬರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘1990ರ ದಶಕದಲ್ಲೇ ಫಲವತ್ತಾದ ಎಕರೆಗಟ್ಟಲೆ ಕೃಷಿ ಭೂಮಿಯನ್ನು ನೌಕಾನೆಲೆ ಯೋಜನೆಗೆ ಬಿಟ್ಟುಕೊಟ್ಟಿದ್ದೇವೆ. ಈ ಜಾಗಕ್ಕೆ ನೀಡಿದ್ದ ಪರಿಹಾರ ಅಲ್ಪ ಪ್ರಮಾಣದ್ದು ಎಂಬ ಕಾರಣಕ್ಕೆ 28ಎ ಕಲಂ ಅಡಿಯಲ್ಲಿ ಹೆಚ್ಚುವರಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಮೂರು ದಶಕಗಳ ಬಳಿಕ ಪರಿಹಾರ ಬಿಡುಗಡೆಯಾಗಿದೆ. ನೌಕಾನೆಲೆ ಯೋಜನೆಯ ಭೂಸ್ವಾಧೀನಾಧಿಕಾರಿ ಖಾತೆಗೆ ಮೊತ್ತ ಜಮಾ ಆಗಿ ತಿಂಗಳು ಕಳೆದಿದೆ. ಎಲ್ಲ ದಾಖಲೆ ನೀಡಿದ್ದರೂ ಪರಿಹಾರ ನೀಡಲು ವಿಳಂಬ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಕೇವಲ ಫೋಟೊಶೂಟ್‌ಗೆ ಸಂತ್ರಸ್ತ ಕುಟುಂಬಗಳನ್ನು ಕರೆಸಿದ್ದರೇ’ ಎಂದು ಖಾರವಾಗಿ ಪ್ರಶ್ನಿಸಿದರು.

ಬ್ಯಾಂಕ್‌ಗೆ ದೃಢೀಕರಣಕ್ಕೆ ಸಹಿ ನೀಡುವುದು ಬಾಕಿ ಇದೆ. ಒಂದೆರಡು ದಿನದೊಳಗೆ ದೃಢೀಕರಿಸಿ ಖಾತೆಗೆ ಪರಿಹಾರ ಜಮಾ ಮಾಡಲು ಕ್ರಮವಹಿಸುತ್ತೇವೆ
ಕಲ್ಯಾಣಿ ಕಾಂಬ್ಳೆ ಪ್ರಭಾರ ಉಪವಿಭಾಗಾಧಿಕಾರಿ

ಪರಿಹಾರ ತಡೆಹಿಡಿದ ‘ವರ್ಗಾವಣೆ’:

‘ನೌಕಾನೆಲೆ ಯೋಜನೆ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ವಿತರಣೆ ಬಿಡುಗಡೆಯಾದ ಅವಧಿಯಲ್ಲಿ ಇಲ್ಲಿನ ಉಪವಿಭಾಗಾಧಿಕಾರಿ ಕನಿಷ್ಕ ಅವರಿಗೆ ಭೂಸ್ವಾಧೀನಾಧಿಕಾರಿ ಹುದ್ದೆಯ ಜವಾಬ್ದಾರಿ ಇತ್ತು. ಪರಿಹಾರ ವಿತರಣೆ ಕಾರ್ಯಕ್ರಮ ದಿನದವರೆಗೂ ಅವರೇ ಹುದ್ದೆಯಲ್ಲಿದ್ದರು. ಪರಿಹಾರ ಆದೇಶ ವಿತರಿಸಿದ ಬೆನ್ನಲ್ಲೇ ಅವರಿಗೆ ವರ್ಗಾವಣೆ ಆದೇಶ ಬಂದಿದೆ. ಅವರು ಹುದ್ದೆ ತೊರೆದಿದ್ದರಿಂದ ಸಂತ್ರಸ್ತರ ಖಾತೆಗೆ ಆರ್‌ಟಿಜಿಎಸ್ ಮೂಲಕ ಹಣ ಪಾವತಿ ಸಾಧ್ಯವಾಗಿಲ್ಲ. ಹೊಸದಾಗಿ ಪ್ರಭಾರ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಯ ಸಹಿ ದೃಢೀಕರಣವಾದ ಬಳಿಕವೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಸಾಧ್ಯವಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘57 ಕುಟುಂಬಗಳ ಪೈಕಿ 20 ಕುಟುಂಬಗಳು ಮಾತ್ರವೇ ದಾಖಲೆ ಸಲ್ಲಿಸಿವೆ. 5 ಮಂದಿ ಈಚೆಗಷ್ಟೆ ಅರ್ಜಿ ಸಲ್ಲಿಸಿದ್ದಾರೆ. ದಾಖಲೆ ಪರಿಶೀಲಿಸಿದ ಬಳಿಕ ಪರಿಹಾರ ಖಾತೆಗೆ ಜಮಾ ಮಾಡಲಾಗುತ್ತದೆ’ ಎಂದು ವಿಶೇಷ ಭೂಸ್ವಾಧಿನಾಧಿಕಾರಿ ಕಚೇರಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.