ADVERTISEMENT

ಶಿರಸಿ| ‘ನೇತ್ರರಥ’ ಗುಡ್ಡಗಾಡು ಜನರ ಆಶಾಕಿರಣ: ಶಾಂತಾರಾಮ ಸಿದ್ದಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:12 IST
Last Updated 25 ನವೆಂಬರ್ 2025, 4:12 IST
ಶಿರಸಿ ತಾಲ್ಲೂಕಿನ ಹುಲೇಕಲ್‍ನಲ್ಲಿ ಸಂಚಾರಿ ಕಣ್ಣಿನ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಚಾಲನೆ ನೀಡಿದರು
ಶಿರಸಿ ತಾಲ್ಲೂಕಿನ ಹುಲೇಕಲ್‍ನಲ್ಲಿ ಸಂಚಾರಿ ಕಣ್ಣಿನ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಚಾಲನೆ ನೀಡಿದರು   

ಶಿರಸಿ: ‘ನೇತ್ರರಥ ಸಂಚಾರಿ ಕಣ್ಣಿನ ಆಸ್ಪತ್ರೆಯು ಗುಡ್ಡಗಾಡು ಜನರ ಅಂಧತ್ವ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಗುಜರಾತಿನ ದೇಸಾಯಿ ಫೌಂಡೇಶನ್ ಟ್ರಸ್ಟ್, ಬೆಂಗಳೂರಿನ ಆಧ್ಯನ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ತಾಲ್ಲೂಕಿನ ಹುಲೇಕಲ್‍ನಲ್ಲಿ ಆರಂಭಿಸಿದ ಸಂಚಾರಿ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತರ ಕನ್ನಡ ಜಿಲ್ಲೆಯಂತಹ ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದ ಜನರು ದೃಷ್ಟಿ ಸಂಬಂಧಿತ ಸಮಸ್ಯೆಯ ಚಿಕಿತ್ಸೆಗಾಗಿ 30– 40 ಕಿ.ಮೀ. ಕ್ರಮಿಸಿ, ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಹಲವಾರು ಜನರು ಸಮಸ್ಯೆ ಉಲ್ಬಣವಾಗುವವರೆಗೂ ಆಸ್ಪತ್ರೆಗಳಿಗೆ ತೆರಳದೇ ಕೊನೆಯ ಹಂತದಲ್ಲಿ ಚಿಕಿತ್ಸೆಗಾಗಿ ತೆರಳುವುದರಿಂದ ಅನೇಕ ರೀತಿಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಪಂಚಾಯಿತಿ ವ್ಯಾಪ್ತಿಗೆ ತೆರಳಿ ಉತ್ತಮ ಸೇವೆ ನೀಡುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಉಪಯುಕ್ತವಾಗುತ್ತದೆ’ ಎಂದರು.

ADVERTISEMENT

ಆಧ್ಯನ್ ಫೌಂಡೇಶನ್‌ ಮುಖ್ಯಸ್ಥೆ ಅಂಜನಾ ಕಾವೂರು ಮಾತನಾಡಿ, ‘ಜನರ ಬೇಡಿಕೆ ಮತ್ತು ಅವಶ್ಯಕತೆಗೆ ತಕ್ಕಂತೆ ಸ್ಕೊಡ್‌ವೆಸ್ ಸಂಸ್ಥೆಯು ಯೋಜನೆಗಳನ್ನು ರೂಪಿಸುತ್ತಿದ್ದು, ಅತ್ಯುತ್ತಮವಾಗಿ ತನ್ನ ಕಾರ್ಯ ನಿರ್ವಹಿಸುತ್ತಿದೆ’ ಎಂದರು. 

ಬೆಂಗಳೂರಿನ ನಯನ ಜ್ಯೋತಿ ಟ್ರಸ್ಟ್ ಸಂಸ್ಥಾಪಕ ಜಯರಾಮನ್‌ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಪರಿಸರಕ್ಕೆ ಅನುಕೂಲವಾಗುವಂತೆ ‘ನೇತ್ರರಥ’ ರೂಪಿಸಲಾಗಿದ್ದು, ಸ್ಕೊಡ್‌ವೆಸ್ ಸಂಸ್ಥೆಯು ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಿದೆ’ ಎಂದು ತಿಳಿಸಿದರು.

ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಸೀಂ ಸಾಬ್, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ದೇಸಾಯಿ ಫೌಂಡೇಷನ್‌ ಅಭಿವೃದ್ಧಿ ವಿಭಾಗದ ನಿರ್ದೇಶಕ ಮನೋಜ ಪಂಡಾ, ಸ್ಕೊಡ್‌ವೆಸ್ ಉಪಾಧ್ಯಕ್ಷ ಕುಮಾರ ಕೂರ್ಸೆ, ಸಹಕಾರ್ಯದರ್ಶಿ ಪ್ರೊ.ಕೆ.ಎನ್.ಹೊಸಮನಿ, ಸದಸ್ಯರಾದ ದಯಾನಂದ ಅಗಾಸೆ, ಪ್ರತಿಭಾ ಭಟ್ ಇದ್ದರು. 

ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್. ರವಿ ವಂದಿಸಿದರು. ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚಿನ ಜನರಿಗೆ ಉಚಿತವಾಗಿ ನೇತ್ರ ತಪಾಸಣೆ ನಡೆಸಲಾಯಿತು.

ಸ್ಕೊಡ್‌ವೆಸ್‌ನಿಂದ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಸಂಚಾರಿ ಕಣ್ಣಿನ ಆಸ್ಪತ್ರೆಗೆ ಚಾಲನೆ ನೀಡಲಾಗಿದ್ದು ಗುಡ್ಡಗಾಡು ಪ್ರದೇಶದ ನೇತ್ರ ಸಮಸ್ಯೆ ಇದ್ದವರು ಇದರ ಪ್ರಯೋಜನ ಪಡೆಯಬೇಕು
ವೆಂಕಟೇಶ ನಾಯ್ಕ ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.