ADVERTISEMENT

ಕಾರವಾರ: ಹೊಸ ತಳಿಗೆ ‘ಬಾಂಧವ್ಯ’ ನಾಮಕರಣ

ಯಲ್ಲಾಪುರ ತಾಲ್ಲೂಕಿನ ಬಾರೆಯಲ್ಲಿ ವೇಲಾ ಪ್ರಭೇದದ ಹೊಸ ಏಡಿ ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 22:00 IST
Last Updated 15 ಫೆಬ್ರುವರಿ 2023, 22:00 IST
ಯಲ್ಲಾಪುರ ತಾಲ್ಲೂಕಿನ ಬಾರೆಯಲ್ಲಿ ಪತ್ತೆಯಾದ ವೇಲಾ ಬಾಂಧವ್ಯ ಪ್ರಭೇದ ಏಡಿ.
ಯಲ್ಲಾಪುರ ತಾಲ್ಲೂಕಿನ ಬಾರೆಯಲ್ಲಿ ಪತ್ತೆಯಾದ ವೇಲಾ ಬಾಂಧವ್ಯ ಪ್ರಭೇದ ಏಡಿ.   

ಕಾರವಾರ: ಹೊಸ ಜಾತಿಯ ವೇಲಾ ಪ್ರಭೇದದ ಸಿಹಿ ನೀರಿನ ಏಡಿಯೊಂದು ಯಲ್ಲಾಪುರ ತಾಲ್ಲೂಕಿನ ಬಾರೆ ಗ್ರಾಮದಲ್ಲಿ ಈಚೆಗೆ ಪತ್ತೆಯಾಗಿದೆ.

ವೇಲಾ ಕುಲಕ್ಕೆ ಸೇರಿದ ನಾಲ್ಕನೇ ಪ್ರಭೇದ ಇದಾಗಿದ್ದು, ಕರ್ಲಿ, ಪುಲ್ವಿನಾಟ, ವಿರೂಪ ಎಂಬ ಪ್ರಭೇದಗಳು ಕೇರಳದ ಕರಾವಳಿಯಲ್ಲಿ ಈ ಮೊದಲು ಪತ್ತೆಯಾಗಿದ್ದವು. ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆ ಸಿಬ್ಬಂದಿ ಪರಶುರಾಮ ಭಜಂತ್ರಿ ಮತ್ತು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಸಮೀರಕುಮಾರ ಪಾಟಿ ತಂಡ ಹೊಸ ತಳಿ ಪತ್ತೆ ಹಚ್ಚಿದ್ದು, ಇದಕ್ಕೆ ‘ವೇಲಾ ಬಾಂಧವ್ಯ’ ಎಂದು ಹೆಸರಿಡಲಾಗಿದೆ.

‘ಹಳದಿ ಮತ್ತು ಕೇಸರಿ ಮಿಶ್ರಿತ ಮೈಬಣ್ಣದ ಈ ಏಡಿಯು ಮಳೆಗಾಲದಲ್ಲಿ ತೋಟ, ಗದ್ದೆಗಳಲ್ಲಿ ಕಾಣಸಿಗುತ್ತವೆ. ಸಮತಟ್ಟಾದ ಜಾಗದ ಮಣ್ಣಿನಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿಯಷ್ಟು ಆಳದಲ್ಲಿ ರಂಧ್ರ‌ ಕೊರೆದು ಇದು ವಾಸ ಮಾಡುತ್ತದೆ. ಸುಮಾರು ನಾಲ್ಕು ಇಂಚು ಅಗಲ, ಮೂರೂವರೆ ಇಂಚು ಉದ್ದವಿರುವ ಈ ಏಡಿಯ ತಲೆಯಿಂದ ಬೆನ್ನಿನ ಮೇಲೆ ಕಪ್ಪು ಬಣ್ಣದ ಪತಂಗದಂಥ ಆಕಾರವಿದೆ’ ಎಂದು ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ ವಿವರಿಸುತ್ತಾರೆ.

ADVERTISEMENT

‘ಹೊಸ ಜೀವಿಗಳಿಗೆ ಲ್ಯಾಟಿನ್ ಹೆಸರುಗಳನ್ನಿಡುವುದು ಸಾಮಾನ್ಯ. ಏಡಿಯ ಸಂಕುಲ ರಕ್ಷಣೆ ಜಾಗೃತಿಗೆ ಹೊಸ ತಳಿಗೆ ‘ಬಾಂಧವ್ಯ’ ಎಂದು ಹೆಸರಿಡಲಾಗಿದೆ. ನನ್ನ ಮಗಳ ಹೆಸರೂ ಇದೇ ಆಗಿರುವುದು ಕಾಕತಾಳೀಯ. ಹೊಸ ಪ್ರಭೇದದ ಏಡಿಯನ್ನ ಪತ್ತೆ ಮಾಡಿರುವ ವರದಿ ನ್ಯೂಜಿಲೆಂಡ್‍ನ ಝೂಟ್ಯಾಕ್ಸಾ ವೈಜ್ಞಾನಿಕ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇನ್ನಷ್ಟು ಅಧ್ಯಯನ ನಡೆಯಬೇಕಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.