ADVERTISEMENT

ಹೊಸ ಕೊಳವೆಬಾವಿಗೆ ಸಿಗದ ಆದ್ಯತೆ

ಸಾಂಪ್ರದಾಯಿಕ ಜಲಮೂಲಗಳ ಅಭಿವೃದ್ಧಿಗೆ ಗಮನ ಹರಿಸಿದ ಜಿಲ್ಲಾ ಪಂಚಾಯ್ತಿ

ಸದಾಶಿವ ಎಂ.ಎಸ್‌.
Published 4 ಜೂನ್ 2020, 20:09 IST
Last Updated 4 ಜೂನ್ 2020, 20:09 IST
ಕುಮಟಾದ ಗಣಪತಿ ದೇವಸ್ಥಾನದ ಪುಷ್ಕರಿಣಿ (ಸಾಂದರ್ಭಿಕ ಚಿತ್ರ)
ಕುಮಟಾದ ಗಣಪತಿ ದೇವಸ್ಥಾನದ ಪುಷ್ಕರಿಣಿ (ಸಾಂದರ್ಭಿಕ ಚಿತ್ರ)   

ಕಾರವಾರ: ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರಿ ಅನುದಾನ ಬಳಸಿ ಈ ವರ್ಷಒಂದೇ ಒಂದು ಕೊಳವೆಬಾವಿ ಕೊರೆದಿಲ್ಲ. ಬದಲಿಗೆ ಈಗಾಗಲೇ ಇರುವ ಯೋಜನೆಗಳ ಪೈಪ್‌ಲೈನ್‌ಗಳನ್ನು ವಿಸ್ತರಣೆ ಮಾಡಲಾಗಿದೆ. ಅಂತರ್ಜಲವೃದ್ಧಿಗೆ ಜಿಲ್ಲಾ ಪಂಚಾಯ್ತಿ ಕೈಗೊಂಡ ಈ ಕ್ರಮ ಪ್ರತಿಫಲ ನೀಡುವ ನಿರೀಕ್ಷೆಯಿದೆ.

‘ಈ ಮೊದಲು ಒಂದು ವರ್ಷಕ್ಕೆ ಸುಮಾರು ಒಂದು ಸಾವಿರ ಕೊಳವೆಬಾವಿಗಳನ್ನು ಕೊರೆದಿರುವ ಉದಾಹರಣೆಯೂ ಇದೆ. ಕಳೆದ ವರ್ಷಈ ಬೇಡಿಕೆಯನ್ನುನಿಯಂತ್ರಿಸಿ 390ಕೊಳವೆಬಾವಿಗಳಿಗೆ ಇಳಿಸಲಾಯಿತು. ಈ ವರ್ಷ ಒಂದಕ್ಕೂ ಅನುಮತಿ ನೀಡಿಲ್ಲ. ಬದಲಾಗಿ, ಸಮಸ್ಯೆ ಎದುರಾದ ಪ್ರದೇಶಕ್ಕೆ ಹತ್ತಿರದಲ್ಲಿರುವ ನೀರಿನ ಯೋಜನೆಯಿಂದಲೇ ಪೈಪ್‌ಲೈನ್ ಅಳವಡಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗಿದೆ’ ಎನ್ನುತ್ತಾರೆಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಷನ್.

‘ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ (ಎನ್.ಆರ್.ಡಿ.ಡಬ್ಲ್ಯು.ಪಿ) ಅಡಿಯಲ್ಲಿ ಪ್ರತಿ ಕೊಳವೆಬಾವಿಗೆ ಇಂಗುಗುಂಡಿ ನಿರ್ಮಿಸುವುದನ್ನು ಕಳೆದ ವರ್ಷದಿಂದ ಕಡ್ಡಾಯ ಮಾಡಲಾಗಿದೆ. ಒಂದುವೇಳೆ,ಅಂದಾಜು ಪಟ್ಟಿಯಲ್ಲಿ ಇದನ್ನುಸೇರಿಸದಿದ್ದರೆ ಕೊಳವೆಬಾವಿ ಕೊರೆಯಲು ಅನುಮತಿ ನೀಡುವುದಿಲ್ಲ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು396 ಕೊಳವೆಬಾವಿಗಳಿಗೆಇಂಗುಗುಂಡಿ ನಿರ್ಮಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಜಲಮೂಲಗಳ ಅಭಿವೃದ್ಧಿ: ‘ಉದ್ಯೋಗ ಖಾತ್ರಿ ಯೋಜನೆಯಡಿಜಿಲ್ಲೆಯಲ್ಲಿ ಸಾಂಪ್ರದಾಯಿಕ ಜಲಮೂಲಗಳನ್ನು ಪುನಃಶ್ಚೇತನ ಮಾಡಲಾಗಿದೆ.ಕಲ್ಯಾಣಿ, ಗೋಕಟ್ಟೆ, ಕುಂಟೆಗಳನ್ನು ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲ ದತ್ತಾಂಶನಿರ್ವಹಣಾ ವ್ಯವಸ್ಥೆಯ (ಎನ್.ಆರ್.ಡಿ.ಎಂ.ಎಸ್) ಮೂಲಕ ಮ್ಯಾಪಿಂಗ್ ಮಾಡಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಒಟ್ಟು 684 ಜಲಮೂಲಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 409ನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ನೀಡಿದ ಯೋಜನಾ ವರದಿಗೆ ಸರ್ಕಾರದಿಂದ ಮಂಜೂರಾತಿಯೂ ಸಿಕ್ಕಿದೆ. ಈಗಾಗಲೇ 86 ಕೆಲಸಗಳು ಪ್ರಗತಿಯಲ್ಲಿವೆ. ಈ ಎಲ್ಲ ಜಲಮೂಲಗಳ ಅಭಿವೃದ್ಧಿಯಿಂದ ಅಂದಾಜು 24.29 ಲಕ್ಷ ಕ್ಯುಬಿಕ್ ಮೀಟರ್ ನೀರು ಸಂಗ್ರಹಿಸಬಹುದು’ ಎಂದು ವಿವರಿಸಿದರು.

ಕಿಂಡಿ ಅಣೆಕಟ್ಟೆ ನಿರ್ಮಾಣ:‘ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಆರು ತಿಂಗಳಲ್ಲಿ 29 ಕಿಂಡಿಅಣೆಕಟ್ಟೆಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಕನಿಷ್ಠ 100ನ್ನಾದರೂ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದು ಮಳೆ ನೀರು ಸಂಗ್ರಹಕ್ಕೆ ದೊಡ್ಡ ಆಸ್ತಿಯಾಗಬಹುದು’ ಎಂದು ಮೊಹಮ್ಮದ್ ರೋಶನ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಿಂಡಿ ಅಣೆಕಟ್ಟೆ ಯೋಜನೆ

231: ಗ್ರಾಮಗಳಲ್ಲಿ ನಿರ್ಮಾಣಕ್ಕೆ ಯೋಜನೆ

500: ಕಿಂಡಿ ಅಣೆಕಟ್ಟೆ ನಿರ್ಮಿಸುವ ಗುರಿ

82: ಈಗಾಗಲೇ ಆರಂಭವಾಗಿರುವ ಕಾಮಗಾರಿ

29ವರೆಗೆ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟೆ

* ಆಧಾರ: ಜಿ.ಪಂ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.