
ದಾಂಡೇಲಿ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಮೂಲವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸುವ ಕೇಂದ್ರ ಬಿಜೆಪಿ ಸರ್ಕಾರದ ನಡೆಯನ್ನು ಭಾರತ ಪ್ರಜಾಸತ್ತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ಖಂಡಿಸುತ್ತದೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮ್ಸನ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ ಮಸೂದೆಯಲ್ಲಿ ಕೆಲಸದ ದಿನಗಳ ಸಂಖ್ಯೆ ಹೆಚ್ಚಿಸುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ಹಣಕಾಸಿನ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರವು ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ’ ಎಂದಿದ್ದಾರೆ.
ಪ್ರಸ್ತಾವಿತ ಮಸೂದೆಯು ವೇತನ ಪಾವತಿಗೆ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು 100 ಪ್ರತಿಶತದಿಂದ ರಾಜ್ಯಗಳಿಗೆ 60:40 ಹಂಚಿಕೆ ವ್ಯವಸ್ಥೆಗೆ ಕಡಿಮೆ ಮಾಡುತ್ತದೆ. ಇದು ನಿರುದ್ಯೋಗ ಭತ್ಯೆಯ ಹೊರೆ ಮತ್ತು ವಿಳಂಬ ಪಾವತಿಗೆ ಪರಿಹಾರವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಮೇಲೆ ವರ್ಗಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರವು ಗಾಂಧೀಜಿಯವರ ಹೆಸರನ್ನು ಅಳಿಸುವ ಪ್ರಯತ್ನವು ಕಾರ್ಮಿಕರು ಮತ್ತು ಗ್ರಾಮೀಣ ಬಡವರ ಹಕ್ಕುಗಳ ಮೇಲಿನ ದಾಳಿಯಾಗಿದೆ. ಉದ್ಯೋಗ ಖಾತ್ರಿಯ ವ್ಯಾಪ್ತಿ ವಿಸ್ತರಿಸುವುದು, ಸಮಯೋಚಿತ ಪಾವತಿಗಳನ್ನು ಖಚಿತಪಡಿಸುವುದು, ವೇತನ ಹೆಚ್ಚಿಸುವುದು ಮತ್ತು ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿ ವಿಸ್ತರಿಸುವುದು ಈ ಸಂದರ್ಭದ ತುರ್ತು ಅಗತ್ಯವಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.