ADVERTISEMENT

ಮೂಲ ನೆಲೆ ಉಳಿಸಿ, ಬೆಳೆಸುವುದೇ ಅಭಿವೃದ್ಧಿ

ಗೋಕರ್ಣ: ಎನ್.ಆರ್.ಜಿ. ಸಮಾವೇಶ ಉದ್ಘಾಟಿಸಿದ ನಿತಿನ್ ರಮೇಶ ಗೋಕರ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:00 IST
Last Updated 5 ಡಿಸೆಂಬರ್ 2019, 14:00 IST
ಗೋಕರ್ಣದಲ್ಲಿ ಎನ್.ಆರ್.ಜಿ. ಸಮಾವೇಶವನ್ನು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ನಿತಿನ್ ರಮೇಶ ಗೋಕರ್ಣ ಗುರುವಾರ ಉದ್ಘಾಟಿಸಿದರು.
ಗೋಕರ್ಣದಲ್ಲಿ ಎನ್.ಆರ್.ಜಿ. ಸಮಾವೇಶವನ್ನು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ನಿತಿನ್ ರಮೇಶ ಗೋಕರ್ಣ ಗುರುವಾರ ಉದ್ಘಾಟಿಸಿದರು.   

ಗೋಕರ್ಣ: ‘ಈ ಕ್ಷೇತ್ರದಲ್ಲಿ ಜನಿಸಿದವರು ಪುಣ್ಯವಂತರು. ಇಲ್ಲಿನ ಮಣ್ಣಿನ ಆಕರ್ಷಣೆಯು ನೂರಾರು ವರ್ಷಗಳಿಂದಲೂ ಜನರನ್ನು ಸೆಳೆಯುತ್ತಲಿದೆ. ಅದನ್ನು ನಾಶ ಮಾಡಿ ಅಭಿವೃದ್ಧಿ ಪಡಿಸುವುದು ಅಭಿವೃದ್ಧಿಯಲ್ಲ’ ಎಂದು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿತಿನ್ ರಮೇಶ ಗೋಕರ್ಣಅಭಿಪ್ರಾಯಪಟ್ಟರು.

ಇಲ್ಲಿಹಮ್ಮಿಕೊಳ್ಳಲಾಗಿರುವ ಮೂರು ದಿನಗಳ, ‘ಎನ್.ಆರ್.ಜಿ. (ಅನಿವಾಸಿ ಗೋಕರ್ಣ ನಿವಾಸಿಗಳು) ಸಮಾವೇಶ’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗೋಕರ್ಣದ ಪ್ರತಿಯೊಂದು ಕೇರಿ, ಓಣಿ, ರಸ್ತೆ, ತೀರ್ಥ, ಪುರಾತನ ದೇವಸ್ಥಾನಗಳು ಪುರಾಣ ಕಾಲದಿಂದಲೂ ತಮ್ಮದೇ ಆದ ಮಹತ್ವವನ್ನು ಸಾರುತ್ತಾ ಬಂದಿವೆ. ಇದು ಅನೇಕ ಗ್ರಂಥ, ನಕ್ಷೆ, ಪುರಾಣಗಳಲ್ಲಿ ಉಲ್ಲೇಖವಾಗಿವೆ. ಸಂಶೋಧನೆಗಳೂ ಈ ಕ್ಷೇತ್ರದ ಬಗ್ಗೆ ಅಗಾಧ ಮಾಹಿತಿ ನೀಡಿವೆ’ ಎಂದು ಹೇಳಿದರು.

ADVERTISEMENT

‘ಅಭಿವೃದ್ಧಿ ತಂತ್ರಜ್ಞಾನದಂತೆ’:‘ಅಭಿವೃದ್ಧಿ ಎಂದರೆ ಇರುವುದನ್ನು ಅಳಿಸಿ ಹಾಕುವುದಲ್ಲ. ಹಿಂದಿನಿಂದ ಬಂದ ಸಂಸ್ಕೃತಿ, ಆಚಾರ, ವಿಚಾರ ಸಾಂಪ್ರದಾಯಿಕ ಪದ್ಧತಿ, ಧಾರ್ಮಿಕ, ಅಧ್ಯಾತ್ಮಿಕ ಚಿಂತನೆ, ವೇದ, ಪರಂಪರೆಯನ್ನು ಉಳಿಸಿ, ಬೆಳೆಸಿ ರಕ್ಷಿಸುವುದಾಗಿದೆ’ ಎಂದು ನುಡಿದರು.

‘ಅಭಿವೃದ್ಧಿ ಎಂಬುದು ತಂತ್ರಜ್ಞಾನಇದ್ದ ಹಾಗೆ. ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ವಾರಾಣಸಿ ಹಾಗೂ ಗೋಕರ್ಣ ಅನೇಕ ವಿಷಯಗಳಲ್ಲಿ ಸಾಮ್ಯತೆ ಹೊಂದಿವೆ. ಹಾಗಾಗಿಯೇ ವಾರಾಣಸಿಯ ಅಭಿವೃದ್ಧಿಗೆ ಗೋಕರ್ಣದವರೇ ನಿಯುಕ್ತಿ ಆಗುವಂತಾಯಿತು’ ಎಂದು ಅವರು ಹೇಳಿದರು.

ಹಿರಿಯ ವೈದ್ಯಡಾ.ಎಸ್.ವಿ.ಜಠಾರ ಮಾತನಾಡಿ, ‘ಪರಿವರ್ತನೆ ಅಭಿವೃದ್ಧಿಯ ಒಂದು ಚಕ್ರ. ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದಲು ನಮ್ಮಲ್ಲಿ ಲಭ್ಯವಿರುವಉಳಿದ ಮಾರ್ಗಗಳನ್ನೂ ಬಳಸಬೇಕು’ ಎಂದರು.

ನಿವೃತ್ತ ಪ್ರಾಚಾರ್ಯಡಾ. ಬಿ.ವಿ.ಮಾರ್ಕಾಂಡೆ ಮಾತನಾಡಿ, ‘ಹಲವರ ಕನಸು ನನಸಾಗಲು ನಾಂದಿ ಹಾಡಿದ ದಿನವಿದು. ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತಲೂ ಮೇಲು. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.

ಕ್ಯಾಲಿಫೋರ್ನಿಯಾದಲ್ಲಿ ವೈದ್ಯರಾಗಿರುವ ಡಾ.ಪ್ರಕಾಶ ನಾಯಕ ಮಾತನಾಡಿ, ‘ಅಭಿವೃದ್ಧಿ ಸರ್ವತೋಮುಖವಾಗಿ ಆಗಬೇಕೇ ಹೊರತು ವೈಯಕ್ತಿಕವಾಗಿ ಅಲ್ಲ. ಇಲ್ಲಿಯದ್ದುಹೆಸರಿಗಷ್ಟೇಅಭಿವೃದ್ಧಿ’ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ವಿದ್ವಾಂಸ ಗಣೇಶ ಜೋಗಳೇಕರ್ ಮಾತನಾಡಿ, ವೈದಿಕತೆ, ಆಧ್ಯಾತ್ಮದ ಸಂರಕ್ಷಣೆಯಾದರೆ ಗೋಕರ್ಣದ ಅಭಿವೃದ್ಧಿ ಸಾಧ್ಯ ಎಂದರು.

ಎನ್.ಆರ್.ಜಿ. ಪರಿವಾರದ ಅಧ್ಯಕ್ಷ ವಿಶ್ವನಾಥ ಗೋಕರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಂಗಾಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ಗೋಕರ್ಣ, ಸುಮಾರು ಒಂದು ಗಂಟೆ ಪರದೆಯ ಮೇಲೆ ಚಿತ್ರಗಳ ಮೂಲಕ ವಾರಾಣಸಿ ಹಾಗೂ ಗೋಕರ್ಣದ ಅಭಿವೃದ್ಧಿಯ ಬಗ್ಗೆ ತಮ್ಮ ಯೋಜನೆಯನ್ನು ವಿವರಿಸಿದರು.

ಅಮೆರಿಕ, ದುಬೈ,ಬ್ರಿಟನ್ಸೇರಿದಂತೆ ವಿವಿಧ ದೇಶಗಳು ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿರುವ 50ಕ್ಕೂ ಹೆಚ್ಚು ಗೋಕರ್ಣ ನಿವಾಸಿಗಳು ಪ್ರತಿನಿಧಿಗಳಾಗಿ ಈ ಸಮಾವೇಶದಲ್ಲಿಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.