ADVERTISEMENT

ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಸುಮ್ಮನಿರಲ್ಲ: ಅಧಿಕಾರಿಗಳಿಗೆ ಸಚಿವ ಹೆಬ್ಬಾರ ತರಾಟೆ

ಕೇವಲ ಪುಸ್ತಕ ಓದಿ ಬಂದು ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 17:09 IST
Last Updated 24 ನವೆಂಬರ್ 2020, 17:09 IST
ಕಾರವಾರದಲ್ಲಿ ಮಂಗಳವಾರ ನಡೆದ ಜಿ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಮಂಗಳವಾರ ನಡೆದ ಜಿ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ ಚಿತ್ರದಲ್ಲಿದ್ದಾರೆ.   

ಕಾರವಾರ: ‘ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆ ಮಾಡಿದ್ರೆ ನಾವು ಸುಮ್ನಿರಲ್ಲ. ಕೇವಲ ಪುಸ್ತಕ ಓದ್ಕೊಂಡು ಬಂದು ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ವೇದಾಂತ ಹೇಳೋರು ಎಲ್ಲಿಂದಲೋ ಬಂದಿದೀರಿ. ಕಾಡು ಉಳಿಸಿರೋರು ನಾವು...’

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಅಧಿಕಾರಿಗಳನ್ನು ಈ ರೀತಿ ತರಾಟೆಗೆ ತೆಗೆದುಕೊಂಡರು.

‘ಜೊಯಿಡಾ ಭಾಗದಲ್ಲಿ ವನ್ಯಜೀವಿಗಳ ಸಂರಕ್ಷಣೆಯ ನೆಪದಲ್ಲಿ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ. ಸೇತುವೆಯ ಕಂಬಗಳನ್ನು ನಿರ್ಮಿಸಲಾಗಿದೆ. ಆದರೆ, ಮೇಲೆ ಕಾಂಕ್ರೀಟ್ ಅಳವಡಿಸಲು ಬಿಡುತ್ತಿಲ್ಲ. ವಿದ್ಯುತ್ ತಂತಿ ದುರಸ್ತಿ, ಕಂಬಗಳ ಮರುಸ್ಥಾಪನೆಗೆ ತಡೆಯೊಡ್ಡಲಾಗುತ್ತಿದೆ. ಈ ರೀತಿ ಎರಡೂವರೆ ವರ್ಷಗಳಲ್ಲಿ ₹ 26 ಕೋಟಿಯ ಕಾಮಗಾರಿಗಳು ನಿಂತಿವೆ. ಅಭಿವೃದ್ಧಿಗೆ ತೊಂದರೆ ಮಾಡುವ ಅಧಿಕಾರಿಗಳ ವಿರುದ್ಧ ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಅಸಮಾಧಾನದಿಂದಲೇ ಎಚ್ಚರಿಕೆ ನೀಡಿದರು.

ADVERTISEMENT

‘ಕಳೆದ ಬಾರಿಯ ಸಭೆಯಲ್ಲಿ ಸೂಚಿಸಲಾದ ಕೆಲಸಗಳ ಪ್ರಗತಿಯ ಬಗ್ಗೆ ಒಂದು ವಾರದಲ್ಲಿ ಪಟ್ಟಿ ಮಾಡಿ ಜಿಲ್ಲಾಧಿಕಾರಿಗೆ ಕೊಡಬೇಕು’ ಎಂದೂ ಸೂಚಿಸಿದರು.

ಹೆಸ್ಕಾಂನ ಪ್ರಗತಿ ಪರಿಶೀಲನೆ ವೇಳೆ ಶಾಸಕಿ ರೂಪಾಲಿ ನಾಯ್ಕ, ಸದಾಶಿವಗಡ ಮತ್ತು ಹಣಕೋಣದಲ್ಲಿ ವಿದ್ಯುತ್ ಸಮಸ್ಯೆಯಿದೆ. ಆ ಭಾಗದಲ್ಲಿ ಉಪ ಕೇಂದ್ರದ ಅಗತ್ಯವಿದೆ ಎಂದು ಗಮನ ಸೆಳೆದರು.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ‘ಜಿಲ್ಲೆಯ ಏಳು ಕಡೆಗಳಲ್ಲಿ ಹೊಸ ಉಪ ಕೇಂದ್ರಗಳ ಅಗತ್ಯವನ್ನು ತಿಳಿಸಲಾಗಿತ್ತು. ಅದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಸಮಸ್ಯೆಯೇನಿದೆ? ವಿಳಂಬ ಯಾಕಾಗಿದೆ’ ಎಂದು ಕೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ಬೆಳೆ ವಿಮೆ ಪಾವತಿಯ ಪ್ರಗತಿಯ ಬಗ್ಗೆ ಯಾಕೆ ಮಾಹಿತಿ ನೀಡುತ್ತಿಲ್ಲ ಎಂದೂ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕೊಡಬೇಕು. ಈ ಬಗ್ಗೆ ಸಭೆಯಲ್ಲಿ ಠರಾವು ಅಂಗೀಕರಿಸಲು ಅವರು ನಿರ್ದೇಶಿಸಿ, ಇಲಾಖೆಯ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರದ ‘ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ ಯೋಜನೆ’ಗೆ ಭಟ್ಕಳ, ಮುಂಡಗೋಡ ತಾಲ್ಲೂಕುಗಳು ಆಯ್ಕೆಯಾಗಿವೆ. ಇದಕ್ಕೆ ಕೇಂದ್ರ ಸರ್ಕಾರವೇ ಅನುದಾನ ನೀಡಲಿದೆ ಎಂದು ಹೆಬ್ಬಾರ ಹೇಳಿದರು.

14 ಶಾಲೆಗಳ ಗುತ್ತಿಗೆ!: ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಹೆಬ್ಬಾರ, ‘ಅಂಕೋಲಾದಲ್ಲಿ ಗುತ್ತಿಗೆದಾರರೊಬ್ಬರು 14 ಶಾಲೆಗಳ ದುರಸ್ತಿಯ ಗುತ್ತಿಗೆ ಪಡೆದುಕೊಂಡಿದ್ದಾರೆ. ಯಾವ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ. ಅವುಗಳ ಬಗ್ಗೆ ಕೇಳಿದರೆ ಅಧಿಕಾರಿಗಳಿಗೆ ಧಮ್ಕಿ ಹಾಕ್ತಾರೆ. ವಿಡಿಯೊ ರೆಕಾರ್ಡಿಂಗ್ ಮಾಡಿಸ್ತಾರೆ. ಒಂದುವೇಳೆ ಈಗ ತರಗತಿಗಳು ಆರಂಭವಾಗಿದ್ದರೆ ವಿದ್ಯಾರ್ಥಿಗಳು ಎಲ್ಲಿ ಕೂರಬೇಕಿತ್ತು? ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಶಾಸಕ ಸುನೀಲ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಇದ್ದರು.

ಸಭೆಯ ಇತರ ಪ್ರಮುಖಾಂಶಗಳು:

* ಸಭೆಗೆ ಗೈರು: ಬಂದರು ಅಧಿಕಾರಿ ಕ್ಯಾ.ಸ್ವಾಮಿಗೆ ನೋಟಿಸ್‌ಗೆ ಸೂಚನೆ

* ಜಿಲ್ಲೆಯಲ್ಲಿ ನೀರಾ ತೆಗೆಯಲು ಅನುಮತಿ ಕೇಳಿ: ಶಿವರಾಮ ಹೆಬ್ಬಾರ

* ಅಂಗನವಾಡಿಗಳಲ್ಲಿ ಅಡುಗೆಕೋಣೆ ಪ್ರತ್ಯೇಕವಾಗಿರಲಿ: ರೂಪಾಲಿ ನಾಯ್ಕ

* 13,300 ಮನೆಗಳಿಗೆ ನಲ್ಲಿ ಸಂಪರ್ಕಕ್ಕೆ ಯತ್ನ: ಸಿ.ಇ.ಒ ರೋಶನ್

* ಉದ್ಘಾಟನೆಗೆ ಸಿದ್ಧವಾಗಿರುವ ಕಾಮಗಾರಿಯ ಪಟ್ಟಿ ಕೊಡಲು ಸೂಚನೆ

* ಜಿಲ್ಲೆಯಲ್ಲಿ ತಾಡಪಾಲಿಗೆ ಹೆಚ್ಚು ಬೇಡಿಕೆ: ಕೃಷಿ ಇಲಾಖೆ ಜೆ.ಡಿ ಹೊನ್ನಪ್ಪ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.